ಜಿಲ್ಲೆ

ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಳೆದ 10 ವರ್ಷಗಳ ಅಧಿಕಾರವಧಿಯಲ್ಲಿ ನಿರುದ್ಯೋಗ ಸೃಷ್ಟಿ, ಬೆಲೆ ಏರಿಕೆಗೆ ಕಾರಣವಾಗಿರುವ ಬಿಜೆಪಿಗೆ ಈ ಲೋಕಸಭೆ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆ ಇಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 400ರಿಂದ 1,200 ರೂ. ಗೆ. ಏರಿಕೆಯಾಗಿದೆ. ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ವಿದೇಶದಲ್ಲಿರುವ ಕಪ್ಪು ಹಣ ದೇಶಕ್ಕೆ ವಾಪಸ್ ತರುತ್ತೇವೆ ಎಂದು ನರೇಂದ್ರ ಮೋದಿ ಹೇಳಿದ್ದರು. ಆ ಹಣ ಎಲ್ಲಿ ಹೋಯಿತು ? ಎಂದು ಪ್ರಶ್ನಿಸಿದರು.

ಸುಳ್ಳು ಹೇಳುವುದರಲ್ಲಿ ಆಸ್ಕರ್ ಪ್ರಶಸ್ತಿ ನೀಡುವುದಾದಲ್ಲಿ ಅದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಸಲ್ಲುತ್ತದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಸ್ವತಃ ಮೋದಿ ಅವರೇ ಹೇಳಿದ್ದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ತಿಂಗಳಲ್ಲಿಯೇ ಮಹದಾಯಿ ಕುರಿತು ವಿಜಯೋತ್ಸವ ಆಚರಿಸುತ್ತೇವೆ ಎಂದು ಹೇಳಿದರು. ಆದರೆ, ಏನೂ ಆಗಿಲ್ಲ. ಪ್ರಸಕ್ತ ಲೋಕಸಭೆ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟವಾಗಿದೆ ಎಂದರು.

ದೇಶದಲ್ಲಿ 400 ಸ್ಥಾನಗಳನ್ನು ಗೆಲ್ಲುವಷ್ಟು ಬಿಜೆಪಿ ಪ್ರಬಲವಾಗಿದ್ದರೆ ರಾಜ್ಯದಲ್ಲಿ ಜೆಡಿಎಸ್ ಜತೆ ಯಾಕೆ ಮೈತ್ರಿ ಮಾಡಿಕೊಳ್ಳಬೇಕಿತ್ತು? ಸಂವಿಧಾನ ಉಳಿಸಬೇಕೆಂಬ ಉದ್ದೇಶದಿಂದ ಇಂಡಿಯಾ ರಚಿಸಲಾಗಿದೆ. ಕಳೆದ ಒಂದು ದಶಕದಿಂದ ಮೋದಿ ಹಿಟ್ಲರ್ ಮಾದರಿಯ ಆಡಳಿತ ನಡೆಸುತ್ತಿದ್ದಾರೆ. ಐಟಿ, ಇಡಿ ಮೂಲಕ ಭಯ ಹುಟ್ಟಿಸುತ್ತಿದ್ದಾರೆ. ಇದಕ್ಕೆಲ್ಲ ಅಂಕುಶ ಹಾಕಲು ಜನ ಬದಲಾವಣೆಯನ್ನು ಬಯಸಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಅನಿಲಕುಮಾರ ಪಾಟೀಲ, ಮೋಹನ ಹಿರೇಮನಿ, ಇತರರು ಇದ್ದರು.