ಹುಬ್ಬಳ್ಳಿ: ಆಡಿಯೋ ರಿಲೀಸ್‌ಗೆ ಸಂಬಂಧಿಸಿ ಮಾಜಿ ಸಚಿವ ಮುನಿರತ್ನ ಅವರಿಗೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ಈ ಕುರಿತು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಗರಾಜ, ಐದು ದಿನಗಳ ಒಳಗೆ ಉತ್ತರಿಸುವಂತೆ ಸೂಚಿಸಿದ್ದೇನೆ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ ದಾಸ್ ಜತೆಗೆ ಚರ್ಚೆ ಮಾಡಿದ್ದೇನೆ. ಈ ನಿಟ್ಟಿನಲ್ಲಿ ನೋಟಿಸ್ ಕೊಟ್ಟಿದ್ದೇವೆ ಎಂದರು.
ಆಡಿಯೋ ಸತ್ಯವೇ ಆಗಿದ್ದರೆ ಅದನ್ನು ಬಿಜೆಪಿ ಒಪ್ಪಲು ಸಾಧ್ಯವಿಲ್ಲ. ಸತ್ಯಾಸತ್ಯತೆ ಹೊರಬರಲಿ. ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೊಟ್ಟಿದ್ದೇವೆ. ಹಿಂದೆ ಇಂತಹ ಸಾಕಷ್ಟು ಪ್ರಕರಣಗಳು ನಡೆದಿವೆ. ಆದರೆ ಕಾಂಗ್ರೆಸ್ ಹಳೆಯ ಕೇಸುಗಳನ್ನು ಕೆದಕುತ್ತಿದೆ. ಬಿಜೆಪಿ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ದ್ವೇಷದ ರಾಜಕಾರಣ ಮಾಡಲು ಹೂಡಿದ ಷಡ್ಯಂತ್ರ ಭಾಗ ಇದಾಗಿದೆ. ಪೊಲೀಸರೂ ತನಿಖೆ ಮಾಡಲಿ. ಮುನಿರತ್ನ ಉತ್ತರದ ನಂತರ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.