ಜಿಲ್ಲೆ

ದುರ್ಗಕ್ಕೆ ಸೊಸೆಯಾಗಿ ಬರಲು ಹೆಣ್ಣು ಮಕ್ಕಳು ಹಿಂದೇಟು ಹಾಕುತ್ತಿದ್ದರು

Chitradurga

ಚಿತ್ರದುರ್ಗ: ಚುನಾವಣೆ ಸಮಯದಲ್ಲಿ ಬಿಜೆಪಿ ಕೊಟ್ಟ ಮಾತಿನಂತೆ ಜನರಿಗೆ ಸವಲತ್ತುಗಳನ್ನು ಕಲ್ಪಿಸಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದ ರು. ನಗರದ ಹೊಳಲ್ಕೆರೆ ರಸ್ತೆ ಹಳ್ಳದ ಏರಿ ಕುಟುಂಬಗಳಿಗೆ ಮಂಗಳವಾರ ಮನೆಗಳ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು,ಕೊಟ್ಟ ಮಾತಿನಂತೆ ನಡೆದಿರುವ ಬಿಜೆಪಿಯನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.

ಕಳೆದ ಹಲವು ವರ್ಷಗಳಿಂದ ನಗರದ ಬಹುತೇಕ ಜನರು ತಮ್ಮ ಮನೆಗಳಿಗೆ ಹಕ್ಕುಪತ್ರ ಇಲ್ಲದೆ ಪರಿತಪಿಸುತ್ತಿದ್ದರು. ಪ್ರತಿ ಚುನಾವಣೆ ಸಂದರ್ಭದಲ್ಲಿ ಈ ಬೇಡಿಕೆ ಎದುರಾಗುತ್ತಿತ್ತು. ಇದನ್ನರಿತ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹಕ್ಕುಪತ್ರ ವಿತರಿಸುವ ಭರವಸೆ ನೀಡಿತ್ತು. ಅರ್ಹ ಕುಟುಂಬಗಳು ಪಟ್ಟಿಯಿಂದ ಬಿಟ್ಟು ಹೋಗಿದ್ದರೆ ಅಂಥ ಕುಟುಂಬಗಳನ್ನು ಗುರುತಿಸಿ ಹಕ್ಕು ಪತ್ರ ವಿತರಿಸಲಾಗುವುದು.

ಕುಡಿವ ನೀರಿನ ಬವಣೆಯಿಂದಾಗಿ ಚಿತ್ರದುರ್ಗಕ್ಕೆ ಸೊಸೆಯಾಗಿ ಬರಲು ಹೆಣ್ಣು ಮಕ್ಕಳು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ನಗರದ ಎಲ್ಲ ಬಡಾವಣೆಗಳ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಬಡಾವಣೆಯಲ್ಲೂ ಸಿಸಿ ರಸ್ತೆಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಕೋವಿಡ್‌ನ ಸಂಕಷ್ಟ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು,ಯಾರೊಬ್ಬರು ಹಸಿವಿನಿಂದ ಬಳಲದಂತೆ ಉಚಿತ ಆಹಾರ ಧಾನ್ಯ ಕೊಟ್ಟಿದ್ದಾರೆ. ಲಸಿಕೆ ಕೊಟ್ಟು ಕೋಟ್ಯಂತರ ಜನರ ಜೀವ ಉಳಿಸಿದ್ದಾರೆ. ಲಸಿಕೆ ವಿರುದ್ಧ ಅಪ್ರಚಾರ ಮಾಡಿದ್ದವರು,ಜನರಿಗೆ ತಪ್ಪು ಮಾಹಿತಿ ನೀಡಿದ್ದವರೇ,ಕ್ಯೂನಲ್ಲಿ ಮೊದಲು ಲಸಿಕೆ ಹಾಕಿಸಿಕೊಂಡಿದ್ದಾರೆ. ಇಂಥವರ ಸಹವಾಸ ನಮಗೆ ಬೇಡವೆಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್‌ಸಿದ್ದಾಪುರ,ನಗರಸಭೆ ಸದಸ್ಯರಾದ ಬಾಲಮ್ಮ, ಸುರೇಶ್,ವೆಂಕಟೇಶ್,ನವೀನ್ ಮತ್ತಿತರರು ಇದ್ದರು.