ವಿಜಯಪುರ: ಆರ್ ಎಸ್ ಎಸ್ ಬಹುದೊಡ್ಡ ದೇಶಭಕ್ತ ಸಂಘಟನೆ, ಪ್ರವಾಹ ಬರಲಿ, ಬರಗಾಲ ಬರಲಿ, ಯುದ್ಧವೇ ಆಗಲಿ ಆಗ ಈ ಸಂಘಟನೆ ಮಾಡುವ ಕೆಲಸ ಸಾಮಾನ್ಯದಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದ್ದಾರೆ.
ಇಂತಹ ಮಹಾನ್ ಸಂಘಟನೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ನಿಜಕ್ಕೂ ಬುದ್ಧಿ ಭ್ರಮಣೆ ಆಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಸೋನಿಯಾ ಗಾಂಧಿ ಅವರ ಕೃಪೆಗೆ ಪಾತ್ರರಾಗಬೇಕು ಎಂಬ ಕಾರಣದಿಂದ ಇವರು ಆರ್ಎಸ್ಎಸ್ ಅನ್ನು ಬೈಯ್ಯುತ್ತಾರೆ. ಸಿದ್ದರಾಮಯ್ಯನವರು ಅತ್ಯಂತ ಕೀಳು ಮಟ್ಟದ, ಅವಮಾನಕರ ಹಾಗೂ ಅಪ್ರಬುದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಆದವರು ನಿಕ್ಕರ್ ಸುಟ್ಟು ಹಾಕುವುದು ಎಂದರೆ ಅವರು ಬಳಸುವ ಪದದ ಬಗ್ಗೆ ಎಚ್ಚರಿಕೆ ಇದೆಯೇ ಎಂದಿದ್ದಾರೆ.
ಈ ಹಿಂದೆ ಆರ್ಎಸ್ಎಸ್ ಅನ್ನು ಎರಡೆರಡು ಬಾರಿ ನಿಷೇಧಿಸಿದ್ದೀರಿ, ಅದೇನು ಈಗ ನಿಂತುಹೋಯಿತಾ ಎಂದು ಪ್ರಶ್ನಿಸಿರುವ ಅವರು ಉತ್ತರ ಪ್ರದೇಶದ 405 ಸೀಟುಗಳಲ್ಲಿ 397 ಸೀಟುಗಳಿಗೆ ಠೇವಣಿಯೇ ಇಲ್ಲ, ನೀವು ಎಷ್ಟರ ಮಟ್ಟಿಗೆ ಅವಮಾನ ಮಾಡುತ್ತೀರಿ ಅಷ್ಟೇ ದೊಡ್ಡ ಮಟ್ಟದಲ್ಲಿ ಆರ್ಎಸ್ಎಸ್ ಬೆಳೆಯುತ್ತೆ ಎಂದು ಹೇಳಿದ್ದಾರೆ.
ನೀವು ಆರ್ಎಸ್ಎಸ್ ನಿಕ್ಕರ್ ಸುಟ್ಟು ಹಾಕಿದ್ದರೆ, ಜನ ನಿಮ್ಮನ್ನು ಸುಟ್ಟು ಹಾಕುತ್ತಿದ್ದಾರೆ. ಜನರ ಮನಸ್ಸಿನಿಂದ ನಿಮ್ಮನ್ನು ಕಿತ್ತು ಹಾಕತ್ತಿದ್ದಾರೆ. ಯಾರೋ ಹೇಳಿಕೊಟ್ಟ ಹಾಗೆ ಸಿದ್ದರಾಮಯ್ಯನವರು ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. (ದಿಗ್ವಿಜಯ ನ್ಯೂಸ್)