ಸೊರಬದಲ್ಲಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಪ್ರಕಾಶ್ ತಲಕಾಲಕೊಪ್ಪ, ಡಾ. ರಾಜು ಎಂ.ತಲ್ಲೂರು, ಡಾ. ಎಚ್.ಇ.ಜ್ಞಾನೇಶ್, ದೇವೇಂದ್ರಪ್ಪ ಚನ್ನಾಪುರ ಇತರರಿದ್ದರು.  
ಜಿಲ್ಲೆ

ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ ರೈತ ಮೋರ್ಚಾ

ಸೊರಬ: ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಹಾಗೂ ಜನವಿರೋಧಿ ನೀತಿಗಳನ್ನು ವಿರೋಧಿಸಿ ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನದಲ್ಲಿಯೇ ಆಡಳಿತ ವೈಫಲ್ಯ ಅನುಭವಿಸುತ್ತಿದೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ರಾಜ್ಯದಿಂದ ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ರೂ. ಕಿಸಾಸ್ ಸಮ್ಮಾನ್ ಯೋಜನೆಯನ್ನು ತಡೆ ಹಿಡಿಯಲಾಗಿದೆ. ಗ್ಯಾರಂಟಿಗಳಿಗಾಗಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳನ್ನು ಕೈಬಿಡಲಾಗುತ್ತಿದೆ. ಬಡ ರೈತರ ಮಕ್ಕಳಿಗೆ ವರವಾಗಿದ್ದ ವಿದ್ಯಾನಿಧಿ ಯೋಜನೆಯನ್ನು ಕೈ ಬಿಟ್ಟಿರುವುದು ಖಂಡನೀಯ ಎಂದರು.
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಡಾ. ರಾಜು ಎಂ.ತಲ್ಲೂರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಕ್ಷೇತ್ರದ ಶಾಸಕರು ತಾಲೂಕಿನ ಬಗ್ಗೆ ಗಮನ ನೀಡುತ್ತಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 2 ಸಾವಿರ ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ನೀಡಲಾಗಿತ್ತು. ಆದರೆ ಈಗಿನ ಶಾಸಕರು ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ ಎಂದು ದೂರಿದರು.
ಯುವ ಮುಖಂಡ ಡಾ. ಎಚ್.ಇ.ಜ್ಞಾನೇಶ್ ಮಾತನಾಡಿ, ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗದೆ ಬೆಳೆಗಳು ಒಣಗುತ್ತಿವೆ. ಇತ್ತ ಮಳೆಯೂ ಇಲ್ಲ. ಮತ್ತೊಂದಡೆ ವಿದ್ಯುತ್ ಇಲ್ಲದೆ ಶುಂಠಿ ಸೇರಿದಂತೆ ಯಾವುದೇ ಬೆಳೆಗಳಿಗೂ ನೀರನ್ನು ಹರಿಸಲು ಸಾಧ್ಯವಾಗುತ್ತಿಲ್ಲ. ರೈತರು ಆತಂಕಗೊಂಡಿದ್ದಾರೆ. ಕೂಡಲೆ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಹಾಗೂ ರೈತರಿಗೆ ಬೆಳೆ ಪರಿಹಾರವನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಹುಸೇನ್ ಸರಕಾವಸ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ತಾಲೂಕು ಉಪಾಧ್ಯಕ್ಷರಾದ ದೇವೇಂದ್ರಪ್ಪ ಚನ್ನಾಪುರ, ಈಶ್ವರ ಚನ್ನಪಟ್ಟಣ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಪುರಸಭೆ ಸದಸ್ಯರಾದ ಈರೇಶ್ ಮೇಸ್ತ್ರಿ, ಎಂ.ಡಿ.ಉಮೇಶ್, ಯು.ನಟರಾಜ್, ಪ್ರಮುಖರಾದ ಮಣ್ಣತ್ತಿ ಪರಮೇಶ್, ಗುರುಕುಮಾರ ಪಾಟೀಲ್, ನಾಗರಾಜ ಬರಗಿ, ಎಂ.ಕೆ.ಯೋಗೇಶ್, ಗುರುಮೂರ್ತಿ, ವಸಂಧುರಾ ಭಟ್, ಮೀನಾಕ್ಷಿ ಹೆಗಡೆ, ಡಿ.ಶಿವಯೋಗಿ, ಅಶೋಕ್ ಶೇಟ್, ಆಶಿಕ್ ನಾಗಪ್ಪ, ಸುರೇಶ್ ಉದ್ರಿ, ಆರ್.ಮನವೇಲ್, ಸುಭಾಷ್, ವಿನಾಯಕ ತವನಂದಿ, ಕೆ.ಜಿ.ಬಸವರಾಜ್ ಇತರರಿದ್ದರು.

ರೈತರ ಆತ್ಮಹತ್ಯೆ ಬಗ್ಗೆ ಹಗುರ ಮಾತು
ಮುಂಗಾರು ವೈಫಲ್ಯವಾಗಿ ಕೇವಲ ಎರಡು ತಿಂಗಳಿನಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕೃಷಿ ಸಚಿವರು ಈ ಬಗ್ಗೆ ಹಗರುವಾಗಿ ಮಾತನಾಡಿರುವುದು ರೈತರ ಬಗ್ಗೆ ನಿರ್ಲಕ್ಷ್ಯತನ ಎದ್ದು ತೋರಿಸಿದ್ದಾರೆ. ಹಿಂದು ವಿರೋಧಿ ಧೋರಣೆಯ ಕಾಂಗ್ರೆಸ್ ಜಿಲ್ಲೆಗೊಂದು ಗೋ ಶಾಲೆಯನ್ನು ಕೈ ಬಿಟ್ಟಿದೆ. ರೈತರ ರಕ್ಷಿಸಲು ಇದ್ದ ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಿದೆ. ರಾಜ್ಯದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸದೆ ಇರುವ ಹಿನ್ನೆಲೆಯಲ್ಲಿ ಭತ್ತ ಹಾಗೂ ಜೋಳದ ಬೆಳೆಗಳು ಒಣಗಿ ಹೋಗಿವೆ ಎಂದು ಪ್ರಕಾಶ್ ತಲಕಾಲಕೊಪ್ಪ ಆರೋಪಿಸಿದರು.