ಮಂಗಳೂರು: ಬಿಜೆಪಿಯವರು ಇಂದಿರಾ ಗಾಂಧಿ ಅವರ ಕಾಲದ ತುರ್ತು ಪರಿಸ್ಥಿತಿಯ ದಿನಗಳನ್ನು ಪದೇಪದೇ ನೆನಪಿಸಿ ನೆಹರು ಕುಟುಂಬವನ್ನು ಅಪಮಾನಿಸಲು ಪ್ರಯತ್ನಿಸುತ್ತಾರೆ. ಆದರೆ ತುರ್ತು ಪರಿಸ್ಥಿತಿಯ ಕಾಲದಲ್ಲಿ ದಕ್ಷಿಣ ಕನ್ನಡದ ಸಾಮಾಜಿಕ ನ್ಯಾಯದಿಂದ ವಂಚಿತ, ದುರ್ಬಲ ಜನವರ್ಗಕ್ಕೆ ಅನುಕೂಲವೇ ಆಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಅವರು ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಬಡ ಜನವರ್ಗಕ್ಕೆ ಸ್ವಂತ ನೆಲ, ಸೂರು, ಭೂಮಸೂದೆ ಕಾಯ್ದೆ, ಋಣಪರಿಹರ ಕಾಯ್ದೆ, ಬಸ್‌ಗಳ ರಾಷ್ಟ್ರೀಕರಣ ಮುಂತಾದ ಜನಪರ ಕಾರ್ಯಕ್ರಮಗಳು ಪರಿಣಾಮಕಾರಿ ಜಾರಿ ತುರ್ತು ಪರಿಸ್ಥಿತಿ ಕಾಲದಲ್ಲಿ ನಡೆಯಿತು ಎಂದು ಅವರು ಪ್ರತಿಪಾದಿಸಿದರು.
ದೇಶದಲ್ಲಿ ಅರಾಜಕತೆ ಸೃಷ್ಟಿ, ಸರ್ಕಾರದ ವಿರುದ್ಧ ಸೇನೆಯ ಬಳಕೆ ಮುಂತಾದ ಪ್ರಯತ್ನಗಳು ನಡೆಯುವ ಸಂದರ್ಭದಲ್ಲಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದಾರೆ . ಆದರೆ ನೆಹರೂ ಕುಟುಂಬ ದೇಶಕ್ಕಾಗಿ ನೀಡಿರುವ ಅನನ್ಯವಾದ ಕೊಡುಗೆಯನ್ನು ಮರೆಮಾಚುವುದು ಅಸಾಧ್ಯ. ದಕ್ಷಿಣ ಕನ್ನಡದ ಬಡವರಿಗೆ ಒಂದು ತುಂಡು ಭೂಮಿ ಯಾವುದಾದರೂ ಪಕ್ಷ ಕೊಟ್ಟಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಅವರು ತಿಳಿಸಿದರು.
ದೇಶದಲ್ಲಿ ಸಂವಿಧಾನ, ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಗೆ ನಿರಂತರ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿಯವರು ವ್ಯಾಪಕವಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಹಿಂದು ಧರ್ಮದಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂದು ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಹೇಳಿದ ಮಾತನ್ನೇ ತಿರುಚಿ ಬಿಜೆಪಿ ಎಲ್ಲೆಡೆ ಅಪಪ್ರಚಾರದಲ್ಲಿ ತೊಡಗಿದೆ. ಆದರೆ ಸಂಸತ್ತಿನಲ್ಲಿ ಆಡಿರುವ ಪ್ರತೀ ಮಾತು ಸಂಸತ್ತಿನ ಕಡತದಲ್ಲಿ ಇರುತ್ತದೆ. ಯಾವಾಗಬೇಕಾದರೂ ಜನರು ಬಿಜೆಪಿಯವರು ಮುಂದಿಡುತ್ತಿರುವ ವಾದದ ಸತ್ಯಾಸತ್ಯತೆಗಳನ್ನು ಮನನ ಮಾಡಿಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾಗಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪಾಲಿಕೆ ಸದಸ್ಯ ನವೀನ್ ಹೆಗ್ಡೆ, ಮುಖಂಡರಾದ ಎಸ್.ಅಪ್ಪಿ, ಜಯಶೀಲ ಅಡ್ಯಂತಾಯ ಮುಂತಾದವರು ಉಪಸ್ಥಿತರಿದ್ದರು.