ಜಿಲ್ಲೆ

ಚುನಾವಣೆ ಬಳಿಕ ಬಿಜೆಪಿ ಬಣ ರಾಜಕೀಯ ಸ್ಫೋಟ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಮೈಸೂರು: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿಯಲ್ಲಿರುವ ಬಣ ರಾಜಕೀಯ ಸ್ಫೋಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಸ್ತಿತ್ವದ ಪ್ರಶ್ನೆ ಇರುವುದು ಬಿಜೆಪಿಯಲ್ಲೇ ಹೊರತು ಕಾಂಗ್ರೆಸ್‌ನಲ್ಲಿ ಅಲ್ಲ. ಹೀಗಾಗಿ ಬಿಜೆಪಿಯವರು ಜನ ತಮ್ಮನ್ನು ಎಲ್ಲಿ ಕೂರಿಸಿದ್ದಾರೆಯೋ ಅಲ್ಲೇ ಇದ್ದುಕೊಂಡು ಕೆಲಸ ಮಾಡಲಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದೆ. ಅದು ಅಧಿಕಾರ ಅವಧಿಯ ವರೆಗೂ ಸುಭದ್ರ ಇರಲಿದೆ. ಸರ್ಕಾರ ಪತನ ಎಂದು ಬಿಜೆಪಿಯವರು ಕಾದು ಕುಳಿತಿರುವುದು ಬೇಡ ಎಂದು ತಿರುಗೇಟು ನೀಡಿದರು.

ಎಸ್‌ಐಟಿ ತನಿಖೆ ಹಾಗೂ ಪೆನ್‌ಡ್ರೈವ್ ದಾಖಲೆ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ತಾಕತ್ತಿಗಿಂತ ದೇಶದ ಕಾನೂನು ದೊಡ್ಡದಾಗಿದೆ. ಕುಮಾರಸ್ವಾಮಿ ದಾಖಲೆ ಕೊಟ್ಟರೆ ಖಂಡಿತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕುಟುಕಿದರು.

ಯಾವುದೇ ಸರ್ಕಾರ, ಪಕ್ಷವಿರಲಿ. ಕಾನೂನು ಅದೆಲ್ಲಕ್ಕಿಂತ ಮುಂದೆ ಇರಬೇಕು ಮತ್ತು ಗೆಲ್ಲಬೇಕು. ಆಗ ಮಾತ್ರ ಜನರಿಗೆ ನ್ಯಾಯ ಕೊಡಲು ಸಾಧ್ಯ. ಎಸ್‌ಐಟಿ ಸರಿಯಾದ ಮಾರ್ಗದಲ್ಲೇ ತನಿಖೆ ಕೈಗೊಂಡಿದೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪದಲ್ಲಿ ಸತ್ಯಾಂಶ ಇಲ್ಲ. ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಕಾನೂನು ಸುವ್ಯವಸ್ಥೆ ಹದಗೆಟ್ಟಿರಲಿಲ್ಲವೇ?

ಇಂತಹ ಘಟನೆಗಳು ನಡೆದಾಗ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಬಿಜೆಪಿಯು ಹೆಣ್ಣು ಮಕ್ಕಳ ಸುರಕ್ಷತೆಯನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸಿದೆ ಎಂದು ಹರಿಹಾಯ್ದರು.