ಜಿಲ್ಲೆ

ವಿಕಸಿತ ಭಾರತ ನಿರ್ಮಾಣಕ್ಕೆ ಮೋದಿ ಗೆಲುವು ಅಗತ್ಯ

ಗೋಪಾಲಕೃಷ್ಣ ಪಾದೂರ್

ಉಡುಪಿ: ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬೆಂಬಲಿಸಬೇಕು ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್​ ಶೆಟ್ಟಿ ಹೇಳಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಆರ್ಟಿಕಲ್​ 370 ಮತ್ತು 35ಎ ರದ್ದತಿ, ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ, ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಯಡಿ ವಾರ್ಷಿಕ ರೂ.6,000 ದಂತೆ 11.3 ಕೋಟಿ ರೈತರಿಗೆ ಆರ್ಥಿಕ ನೆರವು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ನಾರಿ ಶಕ್ತಿ ವಂದನ ಅಧಿನಿಯಮದಡಿ ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಶೇ.33 ಮೀಸಲಾತಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 9.6 ಮನೆಗಳಿಗೆ ಉಚಿತ ಎಲ್​.ಪಿ.ಜಿ. ಸಂಪರ್ಕ, ಸ್ವಚ್ಛ ಭಾರತ್​ ಮಿಷನ್​ ಯೋಜನೆಯಡಿ 11.72 ಕೋಟಿ ಶೌಚಾಲಯಗಳ ನಿಮಾರ್ಣ, ತ್ರಿವಳಿ ತಲಾಖ್​ ನಿಷೆೇಧ, ಯಶಸ್ವಿ ಕೋವಿಡ್​ ನಿರ್ವಹಣೆ, ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿ ಬಡವರಿಗೆ 3 ಕೋಟಿಗೂ ಹೆಚ್ಚು ಮನೆಗಳ ನಿಮಾರ್ಣ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ, ವಿಶ್ವಕರ್ಮ ಯೋಜನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಲ ವರ್ಗದ ಜನತೆಯ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಎಂದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಉಡುಪಿ-&ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್​ ಮಧ್ವರಾಜ್​, ಲೋಕಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಕುತ್ಯಾರು ನವೀನ್​ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ರಾಘವೇಂದ್ರ ಕಿಣಿ, ರೇಷ್ಮಾ ಉದಯ ಶೆಟ್ಟಿ ಉಪಸ್ಥಿತರಿದ್ದರು.