ಜಿಲ್ಲೆ

ರಾಷ್ಟ್ರ ವಿರೋಧಿಗಳ ವಿರುದ್ಧ ಕಾಂಗ್ರೆಸ್​ ಮೃದುಧೋರಣೆ

ಉಡುಪಿ: ಕಾಂಗ್ರೆಸ್​ ದೇಶದ ಬಹುಸಂಖ್ಯಾತರ ಭಾವನೆಗಳಿಗೆ ಬೆಲೆ ನೀಡುವುದಿಲ್ಲ. ರಾಷ್ಟ್ರೀಯ ಏಕತೆ ಮತ್ತು ಅಖಂಡತೆಗೆ ಕವಡೆ ಕಿಮ್ಮತ್ತು ನೀಡದೆ ರಾಷ್ಟ್ರಹಿತಕ್ಕೆ ಕೊಡಲಿಯೇಟು ಕೊಡುತ್ತಿದೆ. ರಾಷ್ಟ್ರವಿರೋಧಿಗಳ ಬಗ್ಗೆ ಮೃದು ಧೋರಣೆ ತಾಳಿರುವ ಕಾಂಗ್ರೆಸ್​ ನಿಂದ ದೇಶದ ರಕ್ಷಣೆ ಊಹಿಸಲು ಸಾಧ್ಯವಿಲ್ಲ ಎಂದು ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಹೇಳಿದರು.

ಮಂಗಳವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಭಾರತ ದೇಶದ ಚಿನ್ನವನ್ನು ಅಡವಿಟ್ಟು ದೇಶವನ್ನು ನಡೆಸುವ ಸ್ಥಿತಿಯಿಂದ ಪ್ರಸಕ್ತ ಮೋದಿ ಆಡಳಿತಾವಧಿಯಲ್ಲಿ 70ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಸಾಲ ನೀಡುವ ಮಟ್ಟಕ್ಕೆ ಬೆಳೆದಿದೆ. ಪುಲ್ವಾಮ ದಾಳಿಗೆ 24 ಗಂಟೆಯೊಳಗೆ ಪಾಕಿಸ್ಥಾನದ ಗಡಿ ದಾಟಿ ಸರ್ಜಿಕಲ್​ ಸ್ರೈಕ್​ ಮೂಲಕ ಪ್ರತ್ಯುತ್ತರ ನೀಡಿದೆ. ಭಾರತೀಯರ ಶೃದ್ಧಾ ಕೇಂದ್ರ ರಾಮ ಮಂದಿರ ನಿಮಾರ್ಣ, ಸಂವಿಧಾನದ 370ನೇ ವಿಧಿ ರದ್ದತಿ, ಟ್ರಿಪಲ್​ ತಲಾಕ್​ ರದ್ಧತಿ ಮುಂತಾದ ಐತಿಹಾಸಿಕ ಸಾಧನೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸಾಧ್ಯವಾಗಿದೆ ಎಂದರು.

ದೇಶವನ್ನು ವಿಶ್ವದ ಐದನೇ ಆರ್ಥಿಕ ಶಕ್ತಿಯನ್ನಾಗಿಸಿ ಮುಂದಿನ ಅವಧಿಯಲ್ಲಿ ವಿಶ್ವದ ಮೂರನೇ ಆರ್ಥಿಕ ಶಕ್ತಿಯನ್ನಾಗಿಸುವ ಪಣ ತೊಟ್ಟಿರುವ ಪ್ರಧಾನಿ ಮೋದಿ ಕೈ ಬಲಪಡಿಸಲು ಕೋಟ ಶ್ರೀನಿವಾಸ ಪೂಜಾರಿಯವರನ್ನು ದೊಡ್ಡ ಅಂತರದ ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಗುರ್ಮೆ ಮನವಿ ಮಾಡಿದರು.

ರಾ. ಹೆ. ಅವೈಜ್ಞಾನಿಕತೆಗೆ ಕಾಂಗ್ರೆಸ್​ ಕಾರಣ
ಯುಪಿಎ ಆಡಳಿತಾವಧಿಯಲ್ಲಿ ಉಡುಪಿಯ ಆಸ್ಕರ್​ ಫೆರ್ನಾಂಡಿಸ್​ ಹೆದ್ದಾರಿ ಸಚಿವರಾಗಿದ್ದ ಸಂದರ್ಭದಲ್ಲಿ ನಡೆದ ರಾ.ಹೆ. 66 ಅವೈಜ್ಞಾನಿಕ ಯೋಜನೆಗೆ ಕಾಂಗ್ರೆಸ್​ ನೇರ ಕಾರಣ ಎಂದು ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್​ ಆರೋಪಿಸಿದರು.

ಯುಪಿಎ ಅವಧಿಯಲ್ಲಿ ರಾ.ಹೆ. ಯೋಜನೆಯಡಿ ಸಂತೆಕಟ್ಟೆ, ಅಂಬಲಪಾಡಿ, ಕಟಪಾಡಿ, ಪಡುಬಿದ್ರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಸಂಸದರಾಗಿದ್ದ ಜಯಪ್ರಕಾಶ್​ ಹೆಗ್ಡೆ ಮೌನ ವಹಿಸಿದ್ದರು. ಸಂಸದೆ ಶೋಭಾ ಕರಂದ್ಲಾಜೆ ಪ್ರಯತ್ನದ ಫಲವಾಗಿ ಇದೀಗ ಈ ಎಲ್ಲಾ ಜಂಕ್ಷನ್​ ಗಳ ಸಮಸ್ಯೆ ಪರಿಹರಿಸಲು ಅಂಡರ್​ ಪಾಸ್​, ಫ್ಲೈ ಓವರ್​ ನಿರ್ಮಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು.

ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಉಡುಪಿ-&ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಪಾಲ್​ ಎ. ಸುವರ್ಣ, ಕಿರಣ್​ ಕುಮಾರ್​ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಆರ್​. ಮೆಂಡನ್​, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್​ ರತ್ನಾಕರ ಹೆಗ್ಡೆ, ಉಡುಪಿ-&ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್​ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಕೆ.ರಾಘವೇಂದ್ರ ಕಿಣಿ, ರೇಷ್ಮಾ ಉದಯ್​ ಶೆಟ್ಟಿ ಉಪಸ್ಥಿತರಿದ್ದರು.