ಜಿಲ್ಲೆ

ಬಿಜೆಪಿ ನಾಯಕರಿಗೆ ಗೆಲುವಿನ ವಿಶ್ವಾಸ

Mangaluru - Hariprasad Rai


ಮಂಗಳೂರು : ಬಿಜೆಪಿ ಕಾರ್ಯಕರ್ತರನ್ನು ಆಧಾರಿತ ಪಕ್ಷವಾಗಿದ್ದು ಸಾಮಾನ್ಯ ಕಾರ್ಯಕರ್ತನಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವುದು ಪಕ್ಷದ ವಿಶೇಷತೆಯಾಗಿದೆ. ಇತರ ರಾಜಕೀಯ ಪಕ್ಷಗಳಲ್ಲಿ ಇಂತಹ ಅವಕಾಶ ಕಾಣಲು ಸಾಧ್ಯವಿಲ್ಲ ಎಂದು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ದ.ಕ.ಸ್ಥಳೀಯಾಡಳಿತ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪೂರ್ವಭಾವಿಯಾಗಿ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ‘ಜಿಲ್ಲೆಯಲ್ಲಿ ಯುವಕರನ್ನು ಸಂಘಟಿಸಿ ಬಿಜೆಪಿ ಯುವ ಮೋರ್ಚಾವನ್ನು ಸದೃಢವಾಗಿ ಬೆಳೆಸಿದ ಯುವ ನಾಯಕ ಕಿಶೋರ್ ಕುಮಾರ್ ಈಗ ಎಂಎಲ್‌ಸಿ ಅಭ್ಯರ್ಥಿಯಾಗಿರುವುದು
ಕಾರ್ಯಕರ್ತರಿಗೆ ಮತ್ತಷ್ಟು ಪ್ರೇರಣೆ ದೊರೆತಿದೆ ಎಂದರು.
ದ.ಕ.ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಕ್ಷೇತ್ರದಲ್ಲಿ ಬಿಜೆಪಿ ಪ್ರತಿನಿಧಿಗಳು ಅತ್ಯಧಿಕ ಸಂಖ್ಯೆಯಲ್ಲಿದ್ದು ಕಿಶೋರ್ ಕುಮಾರ್ ಅವರ ಗೆಲುವು ನಿಶ್ಚಿತ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಉಡುಪಿ ಜಿಲ್ಲೆಯ ಎಲ್ಲ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಮತದಾರರ ಸಭೆ ನಡೆಸಲಾಗುವುದು. ಬಿಜೆಪಿಯ ಮತಗಳ ಜತೆಗೆ ಹೆಚ್ಚುವರಿಗೆ ಶೇ.20ರಷ್ಟು ಮತ ಪಡೆದು ಅಭೂತಪೂರ್ವ ಗೆಲುವು ಸಾಧಿಸುವುದು ನಮ್ಮ ಗುರಿಯಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಹೇಳಿದರು.
ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ ‘ ಪಕ್ಷದ ಹಿರಿಯರು ನನ್ನ ಮೇಲೆ ವಿಶ್ವಾಸ ಇರಿಸಿ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಪಕ್ಷದ ಶಾಸಕರ, ಸಂಸದರ ಹಾಗೂ ಹಿರಿಯರ ಅನುಭವ, ಮಾರ್ಗದರ್ಶನ ಪಡೆದು ಬಿಜೆಪಿಯ ಘನತೆಗೆ ಚ್ಯುತಿಯಾಗದಂತೆ ಜವಾಬ್ದಾರಿ ನಿರ್ವಹಿಸಲು ಬದ್ಧನಾಗಿದ್ದೇನೆ ಎಂದರು.
ಶಾಸಕರಾದ ಡಿ.ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಕ್, ಯಶ್‌ಪಾಲ್ ಸುವರ್ಣ, ಭಾಗೀರಥಿ ಮುರುಳ್ಯ, ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಉಪ ಮೇಯರ್ ಭಾನುಮತಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಮಂಗಳೂರು ವಿಭಾಗ ಸಹ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಲಾಲಾಜಿ ಮೆಂಡನ್, ಸಂಜೀವ ಮಠಂದೂರು ಉಪಸ್ಥಿತರಿದ್ದರು. ಸುನಿಲ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.