ಶಿವಮೊಗ್ಗ: ದ್ರೌಪದಿ ಮುರ್ಮು ನೂತನ ರಾಷ್ಟ್ರಪತಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ನಗರದಲ್ಲಿ ಸಿಹಿ ಸಂಭ್ರಮಿಸಿದರು. ಬಿಜೆಪಿ ಎಸ್ಸಿ ಮೋರ್ಚಾದಿಂದ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು.
ವಿದ್ಯಾನಗರ ದುರ್ಗಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಪ್ರಮುಖರು ಸಿಹಿ ಹಂಚಿದರು. ಬಳಿಕ ಬೈಕ್ ರ‌್ಯಾಲಿಯಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೂ ತೆರಳಿದರು. ಮಾರ್ಗದುದ್ದಕ್ಕೂ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು.
ನಗರ ಪಾಲಿಕೆಯಲ್ಲಿ ನೂತನ ರಾಷ್ಟ್ರಪತಿ ಫೋಟೋ ಅಳವಡಿಕೆ ಸಂದರ್ಭದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಉಪಸ್ಥಿತರಿದ್ದರು. ತಮ್ಮ ಕುರ್ಚಿಯ ಮೇಲೆ ಮುರ್ಮು ಅವರ ಫೋಟೋವನ್ನಿಟ್ಟ ಮೇಯರ್ ಸುನೀತಾ ಅಣ್ಣಪ್ಪ, ನೂತನ ರಾಷ್ಟ್ರಪತಿ ಹಾಗೂ ಭಾರತ ಮಾತೆ ಪರವಾಗಿ ಘೋಷಣೆಗಳನ್ನು ಕೂಗಿದರು. ಉಪಮೇಯರ್ ಶಂಕರ್‌ಗನ್ನಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್ ಮುಂತಾದವರು ಈ ಸಂದರ್ಭದಲ್ಲಿದ್ದರು.