ಹಾಸನ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಳೆದ ಹತ್ತು ವರ್ಷಗಳಲ್ಲಿ 3000 ಬಾರಿ ಸುದ್ದಿಗೋಷ್ಠಿ ಮಾಡಿದ್ದಾರೆ, ವಿಶ್ವಗುರು ಎನಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಯಾಕೆ ಒಂದು ಬಾರಿಯೂ ಮಾಧ್ಯಮದವರೊಂದಿಗೆ ಮಾತನಾಡಿಲ್ಲವೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಟೀಕಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಎಸ್‌ಟಿ ಹೊರೆ ಕಡಿಮೆ ಮಾಡಿರುವುದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಸ್ವದೇಶಿ ವಸ್ತುಗಳ ಬಳಸಿ ಎನ್ನುವ ಪ್ರಧಾನಿ ತಾವು ಮಾತ್ರ ವಿದೇಶಿ ಕಂಪನಿಯ ಕಾರುಗಳಲ್ಲಿ ಓಡಾಡುತ್ತಾರೆ. ಅವರು ಆಡುವ ಮಾತು ಮತ್ತು ಕಾರ್ಯಕ್ಕೆ ಹೊಂದಾಣಿಕೆಯೇ ಆಗುವುದಿಲ್ಲ ಎಂದು ಜರಿದರು.
ಬಿಜೆಪಿ ಸಾಹುಕಾರರ ಪಕ್ಷ. ಆ ಪಕ್ಷದ ಯಾರಿಗೂ ದೇಶದ ಅಭಿವೃದ್ಧಿ ಬೇಕಿಲ್ಲ. ಪ್ರಚಾರಕ್ಕಾಗಿ ಹಪಹಪಿಸುತ್ತಾರೆ. ಮಾಧ್ಯಮಗಳು ಸಹ ಅವರಿಗೆ ಪ್ರಾಧಾನ್ಯತೆ ನೀಡುತ್ತವೆ. ಪತ್ರಕರ್ತರನ್ನು ಕಂಡರೆ ಪ್ರಧಾನಿಗೆ ಹೆದರಿಕೆ ಏಕೆ ಎಂದು ಪ್ರಶ್ನಿಸಿದರು.
ಕೇಂದ್ರದಿಂದ ಅನುದಾನವಿಲ್ಲ: ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಮೂಲಕ ನಮ್ಮ ಸರ್ಕಾರ ಶ್ರಮಿಕ ವರ್ಗಕ್ಕೆ ನೆರವಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಒಂದು ರೂಪಾಯಿ ಅನುದಾನ ನೀಡಿಲ್ಲ. ದೇಶದ ಜನರು ಎಲ್‌ಐಸಿಗೆ ಕಟ್ಟುವ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದಕ್ಕೆ ಉತ್ತರ ಇಲ್ಲ. 50 ರಿಂದ 60 ಸಾವಿರ ಕೋಟಿ ರೂ. ಉದ್ಯಮಿಗಳಾದ ಅಂಬಾನಿ, ಅದಾನಿಗೆ ತಲುಪುತ್ತಿದೆಯೆಂದು ಆರೋಪಿಸಿದರು.
ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆಯೇ ಹೊರತು ಜಾತಿ ಗಣತಿ ಅಲ್ಲ. ಸಮೀಕ್ಷೆಯಲ್ಲಿ ಜಾತಿ ಕುರಿತಾಗಿ ಎರಡು ಪ್ರಶ್ನೆಗಳಿದ್ದರೆ ಉಳಿದ 58 ಪ್ರಶ್ನೆಗಳು ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯುವುದಾಗಿದೆ. ಹಿಂದುಳಿದ ವರ್ಗಗಳ ಆಯೋಗ ಯಾರಿಗೂ ಪ್ರಮಾಣ ಪತ್ರ ನೀಡುವುದಿಲ್ಲ. ಕೆಲವರು ರಾಜಕೀಯ ಉದ್ದೇಶದಿಂದ ಏನೇನೋ ಮಾತನಾಡುತ್ತಿದ್ದಾರೆಂದರು.
ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಿದೆ. ನಾವು ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯಲು ಗಣತಿ ಮಾಡುತ್ತಿದ್ದೇವೆ. ಸಂಪೂರ್ಣವಾಗಿ ಸಮೀಕ್ಷೆ ಮಾಡುತ್ತಿದ್ದೇವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.