ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ ಮಂಜೂರಾತಿ ಪತ್ರಗಳ ವಿತರಣೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ವಿನಿಮಯ ಕಾರ್ಯಕ್ರಮಕ್ಕೆ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು. ಜೋಗಿಗೌಡ, ಕೃಷ್ಣೇಗೌಡ, ರಾಜೇಶ್, ತಿಮ್ಮರಾಯಿಗೌಡ ಇದ್ದರು. 
ಜಿಲ್ಲೆ

ಬರ ಪರಿಹಾರ ಕೇಳುವ ಧೈರ್ಯ ಬಿಜೆಪಿಗರಿಗಿಲ್ಲ

ಶಿವಶಂಕರ್ ಎಂ. ಹೆಬ್ಬಳ್ಳ

ನಾಗಮಂಗಲ : ರಾಜ್ಯದಲ್ಲಿ ಬರ ಘೋಷಣೆಯಾಗಿರುವುದರಿಂದ ಬರ ಪರಿಹಾರವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಇದುವರೆಗೆ ಬರಪರಿಹಾರದ ಹಣವನ್ನು ಬಿಡುಗಡೆ ಮಾಡಿಲ್ಲ. ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿಯ ಮುಂದೆ ಹೋಗಿ ಪರಿಹಾರ ಕೇಳುವ ಧೈರ್ಯ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿ ಕಾರಿದರು.

ಪಟ್ಟಣದ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಶನಿವಾರ ಆಯೋಜಿಸಿದ್ದ ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ ಮಂಜೂರಾತಿ ಪತ್ರಗಳ ವಿತರಣೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರಕ್ಕೆ ಬರ ಪರಿಹಾರ ಹಣ ನೀಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರ ಇದುವರೆಗೆ ಪರಿಹಾರ ನೀಡದೆ ಮೀನಮೇಷ ಎಣಿಸುತ್ತಿದೆ. ತಡವಾದರೂ ಸರಿಯೇ ಒಕ್ಕೂಟ ವ್ಯವಸ್ಥೆಯೊಳಗಿರುವುದರಿಂದ ಅವರು ಕೊಡದೆ ಇರಲು ಸಾಧ್ಯವಿಲ್ಲ. ಅವರು ನೀಡುವ ಪರಿಹಾರದ ಹಣ ಅವರ ಜೇಬಿನಿಂದ ಕೊಡಲ್ಲ, ಅದು ರಾಜ್ಯದ ಜನತೆಯ ತೆರಿಗೆಯ ಹಣ ಎಂದರು.

ರಾಜ್ಯದಲ್ಲಿ ಸರ್ಕಾರ ಬಂದು 6 ತಿಂಗಳಾಗಿದ್ದು, ಇಷ್ಟು ಕಡಿಮೆ ಅವಧಿಯಲ್ಲಿ 78,000 ಕೋಟಿ ರೂ. ಸವಲತ್ತುಗಳನ್ನು ವಿವಿಧ ಯೋಜನೆಗಳಡಿ ರಾಜ್ಯದ ಜನರಿಗೆ ನೀಡಲಾಗಿದೆ. ಆದರೂ, ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ನಿಜ ಎಂದು ಬಿಂಬಿಸಲು ಮುಂದಾಗಿದ್ದಾರೆ. ಆದರೆ ರಾಜ್ಯದ ಜನತೆ ಯಾರೂ ದಡ್ಡರಲ್ಲ. ನಮ್ಮ ಸರ್ಕಾರದ ಯೋಜನೆಗಳ ಬಗ್ಗೆ ಜನತೆಗೆ ಅರಿವಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು ರಾಜ್ಯದ ಜನರ ಸೇವೆಯಲ್ಲಿ ತೊಡಗಿದ್ದೇವೆ. ನಾವು ಯಾರೂ ಕಣ್ಣುತುಂಬ ನಿದ್ರೆ ಮಾಡುತ್ತಿಲ್ಲ. ಹಗಲು-ರಾತ್ರಿ ಜನರಿಗೋಸ್ಕರ ದುಡಿಯುತ್ತಿದ್ದೇವೆ. ಜನರ ಸೇವೆಗಾಗಿ 4 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದೇವೆ. ಇದನ್ನು ನೋಡಿ ವಿರೋಧ ಪಕ್ಷಗಳಿಗೆ ಹೊಟ್ಟೆ ಉರಿ ಬಂದಿದೆ. ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ವಿಪಕ್ಷ ನಾಯಕರನ್ನು ಜನತೆ ಪ್ರಶ್ನೆ ಮಾಡಬೇಕು ಎಂದರು.

6,663 ಕೋಟಿ ರೂ. ಪರಿಹಾರಕ್ಕಾಗಿ ಮನವಿ: ರಾಜ್ಯದ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ 6,663 ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ದೆಹಲಿಗೆ ಹೋಗಿ ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಬಳಿಯೂ ಚರ್ಚೆ ನಡೆಸಿದ್ದೇವೆ. ಇಡೀ ದೇಶದಲ್ಲಿ ಬರ ಪರಿಹಾರಕ್ಕಾಗಿ ಅಧ್ಯಯನ ವರದಿ ಸಲ್ಲಿಸಿರುವುದು ಕರ್ನಾಟಕ ಸರ್ಕಾರ ಮಾತ್ರ. ಉಳಿದ ಯಾವುದೇ ರಾಜ್ಯ ಅಂಕಿ, ಅಂಶಗಳನ್ನು ಅಧ್ಯಯನ ಮಾಡಿ ಸಲ್ಲಿಸಲು ಸಾಧ್ಯವಾಗಿಲ್ಲ. ಜೆಡಿಎಸ್-ಬಿಜೆಪಿ ನಾಯಕರಿಗೆ ನಿಜವಾಗಿಯೂ ಕಾಳಜಿ ಇದ್ದರೆ, ಅವರು ಬರ ಅಧ್ಯಯನ ಮಾಡುವ ಪ್ರಯೋಜನವಿಲ್ಲದ ಕೆಲಸ ಬಿಟ್ಟು, ಪರಿಹಾರ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ ಎಂದು ತಿಳಿಸಿದರು.

ಸುರೇಶ್‌ಗೌಡರ ಅಭಿವೃದ್ದಿ ಏನು?: ಕಳೆದ ಬಾರಿ ಕ್ಷೇತ್ರದ ಶಾಸಕರಾಗಿದ್ದ ಸುರೇಶ್‌ಗೌಡ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆಂದು ತೋರಿಸಲಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸವಾಲು ಹಾಕಿದರು. ಸುರೇಶ್‌ಗೌಡನಿಗೆ ನನ್ನ ಮತ್ತು ಕುಮಾರಸ್ವಾಮಿ ಅವರ ಸಂಬಂಧ ಬಗ್ಗೆ ಅರಿವಿಲ್ಲ, 1999ರಲ್ಲಿ ಇಡೀ ಮೈಸೂರು ಭಾಗದಲ್ಲಿ ನಾನೊಬ್ಬನೇ ಜೆಡಿಎಸ್ ಶಾಸಕನಿದ್ದೆ. ಆಗಲೂ ಅಭಿವೃದ್ಧಿ ಮಾಡಿದ್ದೇನೆ. ಅಭಿವೃದ್ಧಿ ಮಾಡಲು ತಮ್ಮ ಸರ್ಕಾರವೇ ಇರಬೇಕೆಂದಿಲ್ಲ, ವಿರೋಧ ಪಕ್ಷದಲ್ಲಿದ್ದರೂ ಅಭಿವೃದ್ಧಿ ಮಾಡಬಹುದು. ಆದರೆ 14 ತಿಂಗಳು ಅವರದೇ ಪಕ್ಷ ಅಧಿಕಾರದಲ್ಲಿದ್ದರು ಸುರೇಶ್‌ಗೌಡ ಯಾವ ಅಭಿವೃದ್ಧಿ ಮಾಡಿದ್ದಾರೆಂದು ತೋರಿಸಲಿ? ಈ ರೀತಿಯಲ್ಲಿ ಒಂದೇ ಒಂದು ಜನಪರ ಕಾರ್ಯಕ್ರಮ ಮಾಡಿ ಜನರಿಗೆ ಒಳಿತು ಮಾಡಲಿಲ್ಲ. ಈಗ ಹೊಟ್ಟೆ ಉರಿಯಿಂದ ಟೀಕಿಸುವ ಮಾಜಿ ಶಾಸಕರನ್ನು ಕ್ಷೇತ್ರದ ಜನರೇ ಬಾಯಿ ಮುಚ್ಚಿಸಬೇಕು ಎಂದು ಕರೆ ನೀಡಿದರು.
1996ರಲ್ಲಿ ಸುರೇಶ್‌ಗೌಡರನ್ನು ಎಚ್‌ಎಎಲ್ ಕೆಲಸದಿಂದ ತೆಗೆದು ಹಾಕಿದ್ದರು. ಆಗ ನಾನು ಅವರ ಮರು ನೇಮಕಕ್ಕೆ ಶ್ರಮಿಸಿದ್ದೆ. ಆ ತಪ್ಪಿಗಾಗಿ ನನ್ನ ಬಗ್ಗೆ ಸುರೇಶ್‌ಗೌಡ ಹಗುರವಾಗಿ ಮಾತನಾಡುತ್ತಿದ್ದಾರೆ. ಸರ್ಕಾರದಲ್ಲಿ ಸಚಿವರಾಗಲು ಅದೃಷ್ಟಬೇಕು, ಸುರೇಶ್‌ಗೌಡ ಶಾಸಕರಾಗಿದ್ದಾಗ ಅವರ ಸರ್ಕಾರ ಬರಲಿಲ್ಲ, ಅಂದರೆ ನಾವೇನು ಮಾಡೋಕಾಗುತ್ತೆ ಎಂದು ತಿರುಗೇಟು ನೀಡಿದರು.

20 ಕೋಟಿ ರೂ. ಕೊಡಲಿ ಬರೆದುಕೊಡುವೆ: ನಾನು ಕೆರೆ ಜಾಗವನ್ನು ಕಬಳಿಸಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ನೂರು ವರ್ಷಗಳ ಹಿಂದೆ ಮಹಾರಾಜರಿಂದ ದಾನವಾಗಿ ಬಂದಿದ್ದ ಜಮೀನನ್ನು ಖಾಸಗಿ ವ್ಯಕ್ತಿಯಿಂದ ಹಣ ಕೊಟ್ಟು ಖರೀದಿ ಮಾಡಿದ್ದೇವೆ. ಈಗ ಅದನ್ನು ನೂರು ಕೋಟಿ ರೂ. ಬೆಲೆಬಾಳುವ ಆಸ್ತಿ ಎಂದು ಕಥೆ ಕಟ್ಟುತ್ತಿದ್ದಾರೆ. ಅವರು ನನಗೆ ಕೇವಲ 20 ಕೋಟಿ ರೂ. ಕೊಡಲಿ ಸಾಕು ಅವರಿಗೆ ಆಸ್ತಿಯನ್ನು ಬರೆದು ಕೊಡುತ್ತೇನೆ ಎಂದು ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಗಾರ್ಮೆಂಟ್ ಸ್ಥಾಪನೆಗೆ ಪೂಜೆ: 5 ವರ್ಷದಲ್ಲಿ ಅಧಿಕಾರದಲ್ಲಿದ್ದವರು ತಾಲೂಕಿನಲ್ಲಿ ಯಾವೊಂದು ಜನಪರ ಕೆಲಸ ಮಾಡಿಲ್ಲ. ಆದರೂ ನನ್ನ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ. ಜನವರಿ ತಿಂಗಳಿನಲ್ಲಿ ಬೆಳ್ಳೂರಿನಲ್ಲಿ ಗಾರ್ಮೆಂಟ್ಸ್ ಸ್ಥಾಪನೆಗೆ ಭೂಮಿಪೂಜೆ ಮಾಡಲಾಗುವುದು. ನಂತರ ಕೊಪ್ಪ ಹಾಗೂ ದೇವಲಾಪುರ ಭಾಗದಲ್ಲಿಯೂ ಗಾರ್ಮೆಂಟ್ಸ್ ಸ್ಥಾಪಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಷ್ಟವಿದೆ ಗೆಲ್ಲುತ್ತೇವೆ: ನಮ್ಮ ಹೈಕಮಾಂಡ್‌ನವರು ಲೋಕಸಭೆ ಚುನಾವಣೆಯಲ್ಲಿ ಆ ಜಿಲ್ಲೆಯ ಉಸ್ತುವಾರಿ ಸಚಿವರು ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇಬೇಕು ಎಂದು ಟಾಸ್ಕ್ ಕೊಟ್ಟಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಫೈಟ್ ಇದೆ.ಆದರೆ ನಾವು ಜನತಾದಳದವರ ರೀತಿ ಆಗಲೇ ಗೆದ್ದು ಆಗಿದೆ ಎಂದು ಹೇಳೋದಿಕ್ಕೆ ಹೋಗಲ್ಲ. ಆದರೆ ಗೆದ್ದೆ ಗೆಲ್ಲುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಒಂದು ಗುಂಪಿಗೆ ತಲಾ 5 ಲಕ್ಷದಂತೆ 8.24 ಕೋಟಿ ಬಡ್ಡಿರಹಿತ ಸಾಲವನ್ನು ಸ್ವಸಹಾಯ ಸಂಘಗಳಿಗೆ ವಿತರಣೆ ಮಾಡಲಾಯಿತು. ಇದೇ ಸಂದರ್ಭ ರಾಜ್ಯ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಎಚ್.ಟಿ.ಕೃಷ್ಣೇಗೌಡ ಹಾಗೂ ರಾಜೇಗೌಡರನ್ನು ಸನ್ಮಾನಿಸಲಾಯಿತು. 5 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವನಜಾಕ್ಷಿ, ನಿರ್ದೇಶಕರಾದ ನರಸಿಂಹಯ್ಯ, ದಿನೇಶ್, ಚಂದ್ರಶೇಖರ್, ಹಾಲಹಳ್ಳಿ ಅಶೋಕ್, ಜಿಲ್ಲಾ ನೋಂದಣಾಧಿಕಾರಿ ಕಾಂತರಾಜೇ ಆರಸ್, ಮುಖಂಡರಾದ ಧನಲಕ್ಷ್ಮೀ ಚಲುವರಾಯಸ್ವಾಮಿ, ತಿಮ್ಮರಾಯಿಗೌಡ, ಸತೀಶ್, ಚೇತನ್‌ಕುಮಾರ್, ಎನ್.ಜೆ.ರಾಜೇಶ್ ಮತ್ತಿತರಿದ್ದರು.