ಜಿಲ್ಲೆ

ಕಾರಟಗಿ ಪುರಸಭೆ ಅವ್ಯವಹಾರ ತನಿಖೆಯಾಗಲಿ

ಕೊಪ್ಪಳ: ಕಾರಟಗಿಯಲ್ಲಿ ಖಾಸಗಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್​ ನಿರ್ಮಿಸುತ್ತಿದ್ದಾರೆ. ಸಾಕಷ್ಟು ಅವ್ಯವಹಾರ ನಡೆಯುತ್ತಿದ್ದು ತನಿಖೆ ನಡೆಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಆಗ್ರಹಿಸಿದರು.

ಇಂದಿರಾ ಕ್ಯಾಂಟೀನ್​ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. 87 ಲಕ್ಷ ರೂ. ವ್ಯಯಿಸಿ ಖಾಸಗಿ ಜಾಗದಲ್ಲಿ ನಿರ್ಮಿಸುತ್ತಿರುವುದು ಯಾಕೆ ? ಜಾಗ ನರಸಿಂಹ ಆಚಾರ್​ ಎಂಬುವವರದ್ದಾಗಿದ್ದು, ಕಾನೂನು ಸಮಸ್ಯೆ ಇದೆ. ಸರ್ಕಾರಿ ಕಟ್ಟಡ ಸರ್ಕಾರಿ ಜಾಗದಲ್ಲಿ ನಿರ್ಮಿಸಲಿ. ಈ ಬಗ್ಗೆ ಮುಖ್ಯಾಧಿಕಾರಿ, ಡಿಸಿಗೆ ದೂರು ನೀಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲವೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಡಿಸೇಲ್​ ಬಿಲ್​ನಲ್ಲೂ ಗೋಲ್​ ಮಾಲ್​ ನಡೆಯುತ್ತಿದೆ. ಆಡಳಿತಾಧಿಕಾರಿ ಇದ್ದಾಗ 3 ಲಕ್ಷ ರೂ. ಬಿಲ್​ ಬಂದಿದೆ. ಪದಾಧಿಕಾರಿಗಳ ಆಯ್ಕೆಯಾದ ಬಳಿಕ ಒಂದೇ ತಿಂಗಳಲ್ಲಿ 1.15ಲಕ್ಷ ರೂ. ಬಂದಿದೆ. ಪ್ರತಿ ತಿಂಗಳು 2 ಲಕ್ಷ ರೂ. ನಷ್ಟು ಹೆಚ್ಚುಕಮ್ಮಿ ಆಗತ್ತಿದೆ. 50 ಲೀಟರ್​ ಸಾಮರ್ಥ್ಯದ ಕಸದ ಬುಟ್ಟಿಗೆ 1,550ರೂ.ಗೆ ಒಂದರಂತೆ ಖರೀದಿಸಿದ್ದಾರೆ. ದೊಡ್ಡ ಕಂಪನಿ ಕಸದ ಬುಟ್ಟಿ ಕೇವಲ 800ರೂ.ಗೆ ಸಿಗಲಿದೆ. ಖರೀದಿಸಿದರೂ ವಾರ್ಡ್​ಗಳಿಗೆ ವಿತರಿಸಿಲ್ಲ. ಈ ಬಗ್ಗೆ ದಾಖಲೆಗಳೂ ಇಲ್ಲ. ಬೋಗಸ್​ ಬಿಲ್​ ಸೃಷ್ಟಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ ಎಂದರು.

ವಿಪ ಸದಸ್ತೆ ಹೇಮಲತಾ ನಾಯಕ ಮಾತನಾಡಿ, ಇಂದಿರಾ ಕ್ಯಾಂಟೀನ್​ ನಿರ್ಮಿಸಬೇಕೆಂದು ಒತ್ತಡಕ್ಕೆ ಬಿದ್ದು ತರಾತುರಿಯಲ್ಲಿ ನಿಯಮ ಗಾಳಿಗೆ ತೂರಿ ನಿರ್ಮಿಸುತ್ತಿದ್ದಾರೆ. ಭಾಗನಗರದಲ್ಲೂ ಆಂಜನೇಯನ ಜಾತ್ರೆ ನಡೆವ ಸ್ಥಳದಲ್ಲಿ ನಿರ್ಮಿಸುತ್ತಿದ್ದಾರೆ. ವಿರೋಧಿಸಿದಾಗಲೂ ರಾತ್ರೋರಾತ್ರಿ ಕಾಮಗಾರಿ ಆರಂಭಿಸಿದ್ದಾರೆ. ಕೇಳಿದವರಿಗೆ ದಬ್ಬಾಳಿಕೆ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತೊಪಡಿಸಿದರು.

ಕಾರಟಗಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ ಎತ್ತಿನಮನಿ, ಪುರಸಭೆ ಸದಸ್ಯರಾದ ಆನಂದ ಎನ್​., ಫಕೀರಪ್ಪ, ಮುಖಂಡ ಧನಂಜಯ ಇದ್ದರು.