ವಿಜಯವಾಣಿ ಸುದ್ದಿಜಾಲ ಉಡುಪಿ
ಸಿದ್ದರಾಮಯ್ಯ-ಡಿಕೆಶಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಸಿಎಂ-ಡಿಸಿಎಂ ಹಾಗೂ ಸಚಿವರು ಸುಳ್ಳು ಹೇಳುತ್ತ ಅಡ್ಡಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹಳಿತಪ್ಪಿ ಬಿದ್ದಿದ್ದು, ರಾಜ್ಯದ ಬೊಕ್ಕಸ ಖಾಲಿ ಮಾಡಿರುವುದು ಹಾಗೂ ರಾಜ್ಯವನ್ನು ಕಾಂಗ್ರೆಸ್ನ ಎಟಿಎಂ ಮಾಡಿದ್ದೇ ಇವರ ಸಾಧನೆಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್ ಕುಂದಾಪುರ ಆರೋಪಿಸಿದರು.
ಉಡುಪಿ ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಳ್ಳು ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದು, ಅದನ್ನು ಈಡೇರಿಸಲಾಗದೆ ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ. ಕೇಂದ್ರದ ಹಿಂದಿನ ಯುಪಿಎ ಸರ್ಕಾರಕ್ಕಿಂತ ಶೇ.200ಪಟ್ಟು ಹೆಚ್ಚು ಮೊತ್ತವನ್ನು ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ನೀಡಿದ್ದರೂ ಸಹ ಸಿದ್ದರಾಮಯ್ಯ ಅವರು ಜನರ ದಾರಿ ತಪ್ಪಿಸುವಂತೆ ಮಾತನಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಸರಿಯಾಗಿ ಹಣಕಾಸು ನಿರ್ವಹಣೆ ಮಾಡದ್ದರಿಂದ ರಾಜ್ಯದ ಸಾಲದ ಹೊರೆ ಗಣನೀಯ ಏರಿಕೆ ಕಂಡಿದೆ. 2022-23ರಲ್ಲಿ 5.05 ಲಕ್ಷ ಕೋಟಿ ರೂ. ಇದ್ದ ಸಾಲದ ಪ್ರಮಾಣ 2023-24ರಲ್ಲಿ 86,068 ಕೋಟಿ ಸಾಲ ಏರಿತ್ತು. 2024-25ರಲ್ಲಿ 1,05,496 ಕೋಟಿ ರೂ. ಮತ್ತೆ ಸಾಲವಾಗಿದ್ದು ಪ್ರಸಕ್ತ ಆರ್ಥಿಕ ವರ್ಷದಲ್ಲಿ 6.57 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದರು.
ರಾಜ್ಯದಲ್ಲಿ ಇತ್ತೀಚೆಗೆ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು, ನಿಂತ ವಾಹನದಂತಾಗಿದೆ. ಪೊಲೀಸ್ ಇಲಾಖೆ ಇದೆಯೋ ಇಲ್ಲವೋ ಎಂದು ಸಂಶಯ ಬರತೊಡಗಿದ್ದು, ಜನತೆಯಲ್ಲಿ ಆಕ್ರೋಶ ಹೆಚ್ಚುತ್ತಲಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದ್ದರೂ, ಅಲ್ಲಿಯ ಅಧಿಕಾರಿ ಆತ್ಮಹತ್ಯೆಮಾಡಿಕೊಂಡಿದ್ದರೂ ಸಹ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಇನ್ನೂ ವಜಾ ಮಾಡಿಲ್ಲ. ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾಗಿದ್ದು, ಜನರು ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ಹಿಂದು ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ನವರು ಹಗೆತನ ಸಾಧಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರರಾದ ವಿಜಯಕುಮಾರ್ ಉದ್ಯಾವರ, ಗೀತಾಂಜಲಿ ಸುವರ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ ಅಂಬಲಪಾಡಿ ಇದ್ದರು.
ರೈತರ ಅಭಿವೃದ್ಧಿ ನಮ್ಮಿಂದಲೇ ಎಂದು ಬಡಾಯಿ ಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಸರ್ಕಾರ, ಬಿತ್ತನೆ ಬೀಜಗಳ ದರ ಏರಿಕೆ ಮಾಡಿದೆ. ಅಕ್ಕಿ ತಳಿಗಳಾದ ಸಹ್ಯಾದ್ರಿ ಕೆಂಪುಮುಕ್ತಿ ಕ್ವಿಂಟಲ್ಗೆ 2,800ರೂ.ನಿಂದ 4,200ರೂ.ಗೆ ಏರಿಕೆ ಮಾಡಿದೆ. ಜಯಾ- 2,700ರಿಂದ 3,800ರೂ., ಜ್ಯೋತಿ- 3,200ರಿಂದ 4,600ರೂ., ಎಂಒ:4- 3,700ರಿಂದ 4,700 ರೂ., ಉಮಾ- 3,200ರಿಂದ 3,900ರೂ. ಹೆಸರು- 500ರಿಂದ 755 ರೂ. (5 ಕೆಜಿಗೆ), ತೊಗರಿ- 525ರಿಂದ 770 ರೂ. (5 ಕೆಜಿಗೆ) ಏರಿಸಿದೆ. ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ ಎಂದವರು ಬಿತ್ತನೆ ಬೀಜದ ದರದಲ್ಲಿ ಪ್ರಗತಿ ತಂದಿದೆ ಎಂದು ಕಿಶೋರಕುಮಾರ್ ಕುಂದಾಪುರ ಟೀಕಿಸಿದರು.
ತುಷ್ಟೀಕರಣಕ್ಕೆ ಹೊರಟಿರುವ ಕಾಂಗ್ರೆಸ್, ಎಲ್ಲ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗ ಎಂದು ವರ್ಗೀಕರಿಸಿದೆ. ಹಿಂದು ಒಬಿಸಿಗಳ ಮೇಲೆ ಕಣ್ಣು ಹಾಕಿದ್ದು, ಅಲ್ಲಿನ ಅನುದಾನ ಕಡಿತ ಮಾಡಿ ಅದನ್ನೂ ಮುಸ್ಲೀಮರಿಗೆ ಕೊಡಲು ಮುಂದಾಗಿದ್ದು ಸಂವಿಧಾನ ಉಲ್ಲಂಘನೆ ಮಾಡುತ್ತಿದ್ದಾರೆ. ಪ.ಜಾತಿ, ವರ್ಗದವರ ಅಭಿವೃದ್ಧಿಯ 25 ಸಾವಿರ ಕೋಟಿ ರೂ.ವನ್ನು ಗ್ಯಾರಂಟಿ ಯೋಜನೆ ಹಾಗೂ ಇತರ ಉದ್ದೇಶಕ್ಕೆ ಬಳಸಿಕೊಂಡಿದ್ದು, ದಲಿತರ ಕುರಿತು ಸಿದ್ದರಾಮಯ್ಯನವರ ಮೊಸಳೆ ಕಣ್ಣೀರಿಗೆ ಇದು ಸಾಕ್ಷ್ಯವಾಗಿದೆ. ಕಿಶೋರಕುಮಾರ್ ಕುಂದಾಪುರ. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ