ಜಿಲ್ಲೆ

ಮಾವಿನ ನಾಡು ಶ್ರೀನಿವಾಸಪುರದ ಡಾ.ವೇಣುಗೋಪಾಲರೆಡ್ಡಿ ಬಿಜೆಪಿ ಜಿಲ್ಲಾ ಸಾರಥಿ

Kolar

ಕೋಲಾರ: ಇತ್ತೀಚೆಗಷ್ಟೆ ಶ್ರೀನಿವಾಸಪುರ ಮಂಡಲ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಡಾ.ವೇಣುಗೋಪಾಲರೆಡ್ಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಬಡ್ತಿ ಪಡೆದುಕೊಂಡಿದ್ದಾರೆ.

ಶ್ರೀನಿವಾಸಪುರದಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ ಡಾ.ವೇಣುಗೋಪಾಲ್ ಅವರಿಗೆ ಸ್ವಕ್ಷೇತ್ರದಲ್ಲೇ ಬಿಜೆಪಿಯನ್ನು ಕಟ್ಟಿ ಬೆಳೆಸುವುದು ದೊಡ್ಡ ಸವಾಲು. ಇನ್ನು ಜಿಲ್ಲೆಯಲ್ಲಿ ಪಕ್ಷವನ್ನು ಶಕ್ತಿಯುತವಾಗಿ ಬೆಳೆಸಲು ಯಾವ ಟಾನಿಕ್ ನೀಡುತ್ತಾರೋ ಕಾದು ನೋಡಬೇಕಿದೆ.

ಶ್ರೀನಿವಾಸಪುರದಲ್ಲಿ ಶಾಸಕ ಕೆ.ಆರ್.ರಮೇಶ್‌ಕುಮಾರ್, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರನ್ನು ಹಿಂದಕ್ಕೆ ಸರಿಸಿ ಪಕ್ಷ ಸಂಘಟಿಸುವುದು ಸುಲಭದ ಕೆಲಸವಲ್ಲ. ಕ್ಷೇತ್ರಕ್ಕೆ ಸೀಮಿತವಾಗಿದ್ದ ಇವರು ಇನ್ನು ಮುಂದೆ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಗೆ ಶ್ರಮಿಸಬೇಕಿದೆ. ಜಿಲ್ಲಾಧ್ಯಕ್ಷರಾಗಿದ್ದ ಬಿ.ಪಿ.ವೆಂಕಟಮುನಿಯಪ್ಪ ಅವರ ಅವಧಿ ಮುಕ್ತಾಯಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು 3 ತಿಂಗಳಿಂದಲೇ ಪ್ರಕ್ರಿಯೆ ಆರಂಭವಾಗಿತ್ತು. ಅರ್ಧ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ನೂತನ ಅಧ್ಯಕ್ಷರ ಆಯ್ಕೆ ಸಂಸದ ಎಸ್.ಮುನಿಸ್ವಾಮಿ, ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಅವರಿಗೆ ಕಬ್ಬಿಣದ ಕಡಲೆಯಾಗಿತ್ತು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದ ಮುಳಬಾಗಿಲು ವಾಸುದೇವ್, ಕೋಲಾರದ ಓಂಶಕ್ತಿ ಚಲಪತಿ, ಮಾಗೇರಿ ನಾರಾಯಣಸ್ವಾಮಿ, ಮಾಲೂರಿನ ಮಾಜಿ ಶಾಸಕ ಎ.ನಾಗರಾಜು, ಕೆಜಿಎಫ್‌ನ ಎನ್.ಸಂಪಂಗಿ, ಮುಖಂಡರಾದ ಮಾಲೂರಿನ ಪ್ರಭಾಕರ್ ಇನ್ನಿತರರನ್ನು ಸಮಾಧಾನಪಡಿಸಿ ಹೊಸ ಆಯ್ಕೆ ಮಾಡಲಾಗಿದೆ.

ಮಾವಿನೂರಿಗೆ ಸಿಹಿ ಸುದ್ದಿ: ಸಂಕ್ರಾಂತಿಗೂ ಮುನ್ನವೇ ಹೊಸ ಅಧ್ಯಕ್ಷರ ಹೆಸರು ಪ್ರಕಟಿಸಬೇಕೆಂದು ಜಿಲ್ಲೆಯ ಮುಖಂಡರು ವರಿಷ್ಠರ ಮೇಲೆ ಒತ್ತಡ ತಂದಿದ್ದರು. ಜ.4ರಂದು ನಗರದಲ್ಲಿ ನಡೆದ ಸಿಎಎ ಪರ ಜನ ಜಾಗೃತಿ ಸಭೆಯಲ್ಲಿ ಭಾಗಹಿಸಲು ಬಂದಿದ್ದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಶೂನ್ಯ ಮಾಸಕ್ಕೆ ಮುಂಚಿತವಾಗಿಯೇ ನೂತನ ಅಧ್ಯಕ್ಷರ ಹೆಸರು ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿದ್ದರಿಂದ ಆಕಾಂಕ್ಷಿಗಳ ಜಾತಕ ಜಾಲಾಡಿದ ಸಂದರ್ಭದಲ್ಲಿ ಒಕ್ಕಲಿಗರೊಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಿದಲ್ಲಿ ಸಂಘಟನೆಗೆ ಅನುಕೂಲವಾಗುತ್ತದೆ ಎಂದು ಮುಖಂಡರು ನೀಡಿದ ಮಾಹಿತಿ ಅನುಸರಿಸಿ ಡಾ.ವೇಣುಗೋಪಾಲರೆಡ್ಡಿ ಹೆಸರು ಅಂತಿಮಗೊಳಿಸಲು ತೀರ್ಮಾನಿಸಲಾಯಿ ಎನ್ನಲಾಗಿದೆ.

ಡಿಸಿಎಂ ಸಹಪಾಠಿ: ಡಾ.ವೇಣುಗೋಪಾಲರೆಡ್ಡಿ ಡಿಸಿಎಂ ಅಶ್ವತ್ಥನಾರಾಯಣ ಅವರ ಕಾಲೇಜು ಸಹಪಾಠಿ. ಒಂದೇ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದು, ಆಗಿನಿಂದಲೂ ಬಾಂಧವ್ಯ ಹೊಂದಿದ್ದರು. ಪ್ರಧಾನಿ ಮೋದಿಯವರ ನಾಯಕತ್ವದಿಂದ ಪ್ರಭಾವಿತರಾಗಿ 2017ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಇವರು, ಶ್ರೀನಿವಾಸಪುರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಮುಖಂಡರಿಂದ ಅಭಿನಂದನೆ: ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಡಾ.ವೇಣುಗೋಪಾಲರೆಡ್ಡಿ ಅವರನ್ನು ಸಂಸದ ಎಸ್.ಮುನಿಸ್ವಾಮಿ, ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಎ.ನಾಗರಾಜು, ವೈ. ಸಂಪಂಗಿ, ಎಸ್.ಎನ್.ಕೃಷ್ಣಯ್ಯಶೆಟ್ಟಿ, ಬಿ.ಪಿ.ವೆಂಕಟಮುನಿಯಪ್ಪ, ವಿಭಾಗ ಪ್ರಭಾರಿ ಗೀತಾ ವಿವೇಕಾನಂದರೆಡ್ಡಿ, ಕೋಲಾರ ಗ್ರಾಮಾಂತರ ಮಂಡಲಾಧ್ಯಕ್ಷ ಸಿ.ಡಿ.ರಾಮಚಂದ್ರ, ಕೋಲಾರ ನಗರಾಧ್ಯಕ್ಷ ತಿಮ್ಮರಾಯಪ್ಪ ಇನ್ನಿತರರು ಅಭಿನಂದಿಸಿದರು.

ಪಕ್ಷದ ಆದೇಶಕ್ಕೆ ತಲೆಬಾಗುತ್ತೇನೆ: ನಾನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೆ, ಅವಕಾಶ ಸಿಗುವ ವಿಶ್ವಾಸವಿತ್ತು. ವರಿಷ್ಠರ ತೀರ್ಮಾನ ಗೌರವಿಸುವೆ, ಡಾ.ವೇಣುಗೋಪಾಲರೆಡ್ಡಿ ಆಯ್ಕೆಗೆ ಬೇಸರವಿಲ್ಲ, ಅವರೊಟ್ಟಿಗೆ ಪಕ್ಷ ಬಲಪಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವೆ. ವಾಸುದೇವ, ಹಿರಿಯ ಕಾರ್ಯಕರ್ತ, ಮುಳಬಾಗಿಲು