ಜಿಲ್ಲೆ

ಸಾಮಾಜಿಕ ಜಾಲತಾಣ ನಿರ್ವಹಣೆ ಸವಾಲಿನ ಕಾರ್ಯ: ಕಾಗೇರಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸಾಮಾಜಿಕ ಜಾಲತಾಣ ಹಳ್ಳಿ ಹಳ್ಳಿಗಳಲ್ಲೂ ವ್ಯಾಪಕವಾಗಿ ಬೆಳೆಯುತ್ತಿದ್ದು, ನಿರ್ವಹಣೆ ಸವಾಲಿನ ಕೆಲಸವಾಗಿದೆ. ಇತರ ಮಾಧ್ಯಮಗಳಿಗೆ ಹೋಲಿಸಿದರೆ ಪ್ರೌಢಿಮೆ ಕಡಿಮೆಯಾಗುತ್ತಿದ್ದು, ಸುಳ್ಳುಸುದ್ದಿಗಳ ಭರಾಟೆಯಲ್ಲಿ ಜನರನ್ನು ಸುಶಿತರನ್ನಾಗಿಸಿ ರಾಷ್ಟ್ರಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ವಿಧಾನಸಭೆ ಮಾಜಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಗುರುವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ಕಾರ್ಯಾಗಾರ "ಶಂಖನಾದ" ಉದ್ಘಾಟಿಸಿ ಅವರು ಮಾತನಾಡಿದರು.

ಜನಸಾಮಾನ್ಯರಲ್ಲಿ ಸದಭಿರುಚಿ ಬೆಳೆಸುವ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರದ್ದಾಗಿದೆ. ಸಾಮಾಜಿಕ ಜಾಲತಾಣವನ್ನು ರಚನಾತ್ಮಕ ಕಾರ್ಯದಲ್ಲಿ ತೆಗೆದುಕೊಂಡು ಹೋಗಲು ಕೆಲಸ ಮಾಡಬೇಕು ಎಂದು ಹೇಳಿದರು.

ಬೈಂದೂರು ಶಾಸಕ ಗುರುರಾಜ್​ ಗಂಟಿಹೊಳೆ ಮಾತನಾಡಿ, ಹಿಂದುತ್ವ ವಿರೋಧಿಸಿ ರಾಜಕೀಯ ಮಾಡುವುದು ಸಾಧ್ಯವಿಲ್ಲ ಎಂಬುದನ್ನು ಅರಿತ ವಿರೋಧಿಗಳು ಹಿಂದುಗಳ ಮಧ್ಯೆಯೇ ಒಡಕು ಮೂಡಿಸುವ ಕೆಲಸದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಬುದ್ಧವಾಗಿ ವರ್ತಿಸಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​ ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸಾಮಾಜಿಕ ಜಾಲತಾಣ ರಾಜ್ಯ ಸಂಚಾಲಕ ವಿಕಾಸ್​ ಪುತ್ತೂರು, ವಿಭಾಗ ಪ್ರಭಾರಿ ಉದಯ್​ ಶೆಟ್ಟಿ, ನಯನಾ ಗಣೇಶ್​ ಉಪಸ್ಥಿತರಿದ್ದರು. ವಕ್ತಾರ ರಾವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿ, ಪ್ರದಿಪ್​ ಶೆಟ್ಟಿ ನಿಟ್ಟೆ ವಂದಿಸಿದರು.