ಯಳಂದೂರು: ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಎನ್‌ರಿಚ್ ಮಹದೇವಸ್ವಾಮಿ ಹಾಗೂ ಪಿಎಸಿಸಿ ಬ್ಯಾಂಕಿನ ಅಧ್ಯಕ್ಷ ಆರ್.ಎಸ್.ಪ್ರಸಾದ್ ಮಂಗಳವಾರ ಸಂತೆಮರಹಳ್ಳಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಎನ್‌ರಿಚ್ ಮಹದೇವಸ್ವಾಮಿ ಮಾತನಾಡಿ, ನಾನು ಈ ಹಿಂದೆ ಬಿಜೆಪಿ ಪಕ್ಷದಲ್ಲಿದ್ದೆ. ಪಕ್ಷದಲ್ಲಿ ಪ್ರಮಾಣಿಕವಾಗಿ ದುಡಿದಿದ್ದೆ. ಆದರೆ ನನಗೆ ಅಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ. ಯಡಿಯೂರಪ್ಪರ ನಾಯಕತ್ವದಲ್ಲಿ ಅಲ್ಲಿ ಎಲ್ಲವೂ ಚೆನ್ನಾಗಿತ್ತು. ಈಗ ಪರಿಸ್ಥಿತಿ ಭಿನ್ನವಾಗಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಜಾತ್ಯತೀತ ನಿಲುವು ನನಗೆ ಹೆಚ್ಚು ಆಕರ್ಷಿಸಿತು. ಪಕ್ಷದ ತತ್ವ ಸಿದ್ಧಾಂತಗಳಿಗೋಸ್ಕರ, ಇಲ್ಲಿನ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರು ಜನಾನುರಾಗಿಯಾಗಿದ್ದಾರೆ. ಎಲ್ಲ ಜಾತಿ, ಮತ, ಧರ್ಮದವರನ್ನು ಒಗ್ಗೂಡಿಸಿಕೊಂಡು ನಡೆಯುತ್ತಿದ್ದಾರೆ. ಇದರಿಂದ ಆಕರ್ಷಿತನಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾನೆ. ಇಲ್ಲಿಗೆ ಯಾವುದೇ ಆಮಿಷಗಳಿಗೂ ಒಳಗಾಗಿ ನಾನು ಬಂದಿಲ್ಲ. ಇಲ್ಲಿದ್ದುಕೊಂಡು ಜನಸೇವೆ ಮಾಡಬೇಕೆಂಬ ಉದ್ದೇಶದಿಂದ ಬಂದಿದ್ದೇನೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರತಿಷ್ಠಾನದ ಅಧ್ಯಕ್ಷ ಎಚ್.ವಿ. ಚಂದ್ರು, ಆರ್.ಮಹದೇವಸ್ವಾಮಿ, ಸಿದ್ದಲಿಂಗಸ್ವಾಮಿ, ಕೆಂಪನುಪುರ ಶಿವಶಂಕರ್, ಗೌಡ್ರಬಸವಣ್ಣ, ಶಂಕರಮೂರ್ತಿ, ಡಿ.ಪಿ. ಪ್ರಕಾಶ್, ಕೆಂಪನಪುರ ಪ್ರಭುಸ್ವಾಮಿ, ಕಿಟ್ಟಪ್ಪ, ಜೆ.ಯೋಗೇಶ್, ಕಿನಕಹಳ್ಳಿ ಪ್ರಭುಪ್ರಸಾದ್, ಚೇತನ್ ದೊರೈರಾಜ್ ಸೇರಿದಂತೆ ಅನೇಕರು ಇದ್ದರು.