ಮಡಿಕೇರಿ: ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ವಯೋವೃದ್ಧರಿಗೆ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಮಡಿಕೇರಿಯ ಕೊಡಗು ವಿದ್ಯಾಲಯ ಬಳಿಯಿರುವ ಶ್ರೀ ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಹಿರಿಯರ ಯೋಗಕ್ಷೇಮ ವಿಚಾರಿಸಿ, ಭೋಜನದ ವ್ಯವಸ್ಥೆ ಏರ್ಪಡಿಸಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಸಂಸದ ಯದುವೀರ್ ಒಡೆಯರ್ ಯಾವುದೇ ಪ್ರಚಾರ ಬಯಸದೆ ಕೊಡಗಿನಾದ್ಯಂತ ಸಂಚರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಮುಂದೆಯೂ ಸಾಕಷ್ಟು ವರ್ಷಗಳ ಕಾಲ ಸಂಸದರಾಗಿ, ಕೇಂದ್ರದ ಮಂತ್ರಿಗಳಾಗಿ ಸೇವೆ ಸಲ್ಲಿಸಲು ದೇವರು ಅನುಗ್ರಹ ನೀಡಲಿ ಎಂದು ಆಶಿಸಿದರು.
ಜಿಲ್ಲೆಯ ರಸ್ತೆ ಅಭಿವೃದ್ದಿ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ ರೂ.೧.೩೩ ಕೋಟಿ ಅನುದಾನ, ಸ್ವಚ್ಛತಾ ಆಂದೋಲನಕ್ಕಾಗಿ ಮಡಿಕೇರಿ, ಕುಶಾಲನಗರ, ವಿರಾಜಪೇಟೆಗೆ ಒಟ್ಟು ೧೨ ಕೋಟಿ, ಅಮೃತ ೨ ಯೋಜನೆಯಡಿ ೪೨ ಕೋಟಿ ಅನುದಾನ ಒದಗಿಸಿದ್ದಾರೆ. ಎನ್‌ಡಿಆರ್‌ಎಫ್‌ನಡಿ ಅನೇಕ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ರವಿ ಕಾಳಪ್ಪ ಹೇಳಿದರು.
ಈ ಸಂದರ್ಭ ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಮಾಜಿ ನಗರಸಭೆ ಅಧ್ಯಕ್ಷ ಪಿ.ಡಿ.ಪೊನ್ನಪ್ಪ, ಪ್ರಮುಖರಾದ ಬೊಳ್ಳಜಿರ ಬಿ.ಅಯ್ಯಪ್ಪ, ಕವನ್ ಕಾವೇರಪ್ಪ, ಶಿವಕುಮಾರಿ, ಪಾಂಡಿರ ಪೂಣಚ್ಚ, ಗಜೇಂದ್ರ ಸೇರಿದಂತೆ ಪಕ್ಷದ ಕಾರ್ಯಕರ್ತರು, ಶಕ್ತಿ ಆಶ್ರಮದ ಮೇಲ್ವಿಚಾರಕಿ ರೀನಾ, ಸಿಬ್ಬಂದಿ ವಿಜಯಲಕ್ಷ್ಮಿ ಇದ್ದರು.