ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜ ತೆರವು ವಿವಾದ ಸಂಬಂಧ ನಡೆದ ಪಾದಯಾತ್ರೆ ವೇಳೆ ಲಾಠಿಚಾರ್ಜ್‌ನಿಂದ ಗಾಯಗೊಂಡಿದ್ದವರ ಆರೋಗ್ಯವನ್ನು ಬಿಜೆಪಿ ಮುಖಂಡರು ವಿಚಾರಿಸಿ ಸಾಂತ್ವನ ಹೇಳಿದರು.
ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ನೇತೃತ್ವದಲ್ಲಿ ಗಾಯಗೊಂಡಿದವರ ಮನೆಗೆ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ಶಾಸಕನ ಫ್ಲೆಕ್ಸ್ ಹರಿದ ಆರೋಪದ ಮೇಲೆ ಗ್ರಾಮದ ಪಾಪಣ್ಣ ಎಂಬುವರ ಜತೆಗೆ ಅವರ ಅಪ್ರಾಪ್ತ ಮಗನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ವಾಪಸ್ ಕಳುಹಿಸಿರುವ ವಿಚಾರ ಬೆಳಕಿಗೆ ಬಂದಿತು.
ಈ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗ ಪಾಪಣ್ಣ ಅವರ ಮನೆಗೆ ಹೋದಾಗ ತಡೆಯೊಡ್ಡಿದರು. ನಮಗೆ ರಾಜಕೀಯ ಬೇಡ, ಯಾವ ಧ್ವಜವಾದರೂ ಹಾರಾಡಲಿ ಎಂದು ಬೇಸರ ವ್ಯಕ್ತಪಡಿಸಿದರು. ಆ ಬಳಿಕ ಪಾಪಣ್ಣ ಅವರನ್ನು ಸಮಾಧಾನಪಡಿಸಿದ ಡಾ.ಎನ್.ಎಸ್.ಇಂದ್ರೇಶ್, ನಾವು ನಿಮ್ಮೊಂದಿಗೆ ಇದ್ದೇವೆ. ನ್ಯಾಯಕ್ಕಾಗಿ ಹೋರಾಡಿದ್ದೇವೆ. ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಎನ್.ಎಸ್.ಇಂದ್ರೇಶ್, ಹನುಮಾನ್‌ಧ್ವಜ ಹೋರಾಟದಲ್ಲಿ ಭಾಗಿಯಾದವರನ್ನ ಹೆದರಿಸಿ ಬೆದರಿಸಲಾಗುತ್ತಿದೆ. ಪೊಲೀಸರು 9ನೇ ತರಗತಿ ಹುಡುಗನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಇದರಿಂದ ಅಪ್ರಾಪ್ತನ ಪಾಲಕರು ಹೆದರಿಕೊಂಡಿದ್ದಾರೆ. ನಾವು ಯಾರನ್ನೂ ಬೇರೆ ಜಿಲ್ಲೆಯಿಂದ ಕರೆಸಿಲ್ಲ. ಎಲ್ಲರೂ ಕೆರಗೋಡು, ಮಂಡ್ಯದವರೆ ಇದ್ದವರು. ಕಾಂಗ್ರೆಸ್ ನಾಯಕರು ಬೇರೆ ಜಿಲ್ಲೆಯವರನ್ನು ಒಬ್ಬರನ್ನು ತೋರಿಸಲಿ. ಕಾಂಗ್ರೆಸ್‌ನವರಿಗೆ ಈಗ ರಾಷ್ಟ್ರ ಧ್ವಜ ನೆನಪಾಗಿದೆ. ನಾವು ಹರ್‌ಘರ್ ತಿರಂಗಾ ಅಭಿಯಾನ ಮಾಡಿ ಲಕ್ಷಾಂತರ ಬಾವುಟ ಹಾರಿಸಿದ್ದೇವೆ ಎಂದು ತಿರುಗೇಟು ನೀಡಿದರು.
ಮುಖಂಡರು, ಗ್ರಾಪಂ ಸದಸ್ಯರ ಸಭೆ: ವಿವಾದ ಹಿನ್ನೆಲೆಯಲ್ಲಿ ಗ್ರಾಮದ ಕೆರಗೋಡು ಗ್ರಾಮದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ನಿಯೋಗ, ಗ್ರಾಮದ ಮುಖಂಡರು ಹಾಗೂ ಗ್ರಾಪಂ ಸದಸ್ಯರು ಸಭೆ ಮಾಡಿ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಅಶೋಕ್ ಜಯರಾಂ ಮಾತನಾಡಿ. ನಮ್ಮ ಬಿಜೆಪಿ ನಿಯೋಗ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿದ್ದೆವು. ಗ್ರಾಮದಲ್ಲಿ ಗ್ರಾಪಂ ಸದಸ್ಯರು, ಮುಖಂಡರೊಂದಿಗೆ ಚರ್ಚೆ ಮಾಡಿದ್ದೇವೆ. ಗೌರಿಶಂಕರ ಸೇವಾ ಟ್ರಸ್ಟ್ ಪದಾಧಿಕಾರಿಗಳ ಜತೆಯೂ ಮಾತನಾಡಿದ್ದೇವೆ. ಇಲ್ಲಿನ ಸತ್ಯಾಸತ್ಯತೆ ತಿಳಿದಿದ್ದೇವೆ. ಅಮಾಯಕರ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ. ಲಾಠಿ ಚಾರ್ಜ್‌ನಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದೇವೆ. ಭಯದಲ್ಲಿರುವರರಿಗೆ ಧೈರ್ಯ ತುಂಬಿದ್ದೇವೆ ಎಂದರು.
ಗ್ರಾಮದಲ್ಲಿ ಹಿಂದಿನಿಂದ ಶಾಂತಿಯುತ ವಾತಾವರಣವಿತ್ತು. ಶಾಂತಿ ಸಭೆಗೆ ಅವಕಾಶ ಕೊಡದೆ ಈ ರೀತಿಯ ವರ್ತನೆ ತೋರಿಸಿದ್ದಾರೆ. ಹೊರಗಿನ ಜನರನ್ನ ನಾವು ಯಾರೂ ಕರೆಸಿಲ್ಲ. ಹೊರ ಜಿಲ್ಲೆಗಳಿಂದ ಪೊಲೀಸರನ್ನ ಕರೆಸಿ ಗೂಂಡಾ ವರ್ತನೆಯನ್ನು ರಾಜ್ಯಸರ್ಕಾರ ಮಾಡಿದೆ. ಜಿಲ್ಲಾಡಳಿತ ಶಾಂತಿ ಸಭೆಯನ್ನು ಮಾಡಿಲ್ಲ. ಕೆರಗೋಡು ಗ್ರಾಮಕ್ಕೆ ಕಪ್ಪುಚುಕ್ಕೆ ಬರುವಂತೆ ಸರ್ಕಾರ ಮಾಡಿದೆ. ಬೆಳಗ್ಗಿನ ಜಾವ 5 ಗಂಟೆಗೆ ಬಾಲಕನನ್ನ ಕರೆದು ಪೊಲೀಸರು ವಿಚಾರಣೆ ಮಾಡಿದ್ದಾರೆ. ಅಂಗಡಿ ಮಾಲೀಕರ ಮೇಲೂ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಗ್ರಾಮಸ್ಥರು, ಮಕ್ಕಳು, ಮಹಿಳೆಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಪೊಲೀಸರ ಈ ವರ್ತನೆ ಖಂಡನೀಯ. ಬ್ರಿಟಿಷರ ಪ್ರೌವೃತ್ತಿ ಕಾಂಗ್ರೆಸ್‌ನಿಂದ ಮುಂದುವರೆದಿದೆ ಎಂದು ವಾಗ್ದಾಳಿ ನಡೆಸಿದರು.