ಜಿಲ್ಲೆ

ಕಾಂಗ್ರೆಸ್ ಮಾಡಿದ್ದು ಇಂಡಿಯಾ ಜೋಡೋ ಯಾತ್ರೆಯೇ: ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ವ್ಯಂಗ್ಯ

ಕೆ.ಎನ್.ರಾಘವೇಂದ್ರ

ಮಂಡ್ಯ: ಭಾರತ ಹೆಸರಿನ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ಸಿಗರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ನಮ್ಮ ರಾಷ್ಟ್ರಗೀತೆಯಲ್ಲಿ ಭಾರತ ಭಾಗ್ಯವಿಧಾತ ಎಂದಿದೆಯೇ ಹೊರತು ಇಂಡಿಯಾ ವಿಧಾತ ಎಂದಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಷ್ಟ್ರಕವಿ ಕುವೆಂಪು ಬರೆದಿರುವ ನಾಡಗೀತೆಯಲ್ಲಿ ಭಾರತ ಜನನಿಯ ತನುಜಾತೆ ಎಂದಿದೆ. ಇಂಡಿಯಾ ಮಾತೆ ಎಂದಲ್ಲ. ಇನ್ನು ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರು ಪಡೆದಿರುವುದು ಭಾರತ ರತ್ನ ಪ್ರಶಸ್ತಿಯೇ ಹೊರತು ಇಂಡಿಯಾ ರತ್ನವನ್ನಲ್ಲ. ಕಳೆದ ವರ್ಷ ಕಾಂಗ್ರೆಸ್ ಮಾಡಿದ ಪಾದಯಾತ್ರೆ ಇಂಡಿಯಾ ಜೋಡೋ ಯಾತ್ರೆಯೇ ಎಂದು ಪ್ರಶ್ನಿಸಿರುವ ಅವರು, ಕಾಂಗ್ರೆಸ್ಸಿಗಳು ಬೇಕಿದ್ದರೆ ಸೋನಿಯಾ ಮಾತಾಕಿ ಜೈ ಎನ್ನಲಿ, ರಾಹುಲ್ ಜೈ ಎನ್ನಲಿ, ಪ್ರಿಯಾಂಕಾ ಜೈ ಅನ್ನಲಿ. ಆದರೆ ದೇಶವನ್ನು ಭಾರತವೆನ್ನಲು ಹಾಗೂ ಭಾರತ್ ಮಾತಾಕಿ ಜೈ ಎನ್ನಲು ವಿರೋಧಿಸದಿದ್ದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಇನ್ನು ನೂರಾರು ವಿದೇಶಿ ದಾಳಿಕೋರರು ಭಾರತದ ಮೇಲೆ ನಿರಂತರ ದಾಳಿಮಾಡಿದ್ದಾರೆ ಮೊಘಲರಿಂದ ಹಿಡಿದು ಬ್ರಿಟಿಷರವರೆವಿಗೂ ದೇಶದ ಮೇಲೆ ಆಕ್ರಮಣ ನಡೆದಿವೆ. ದಾಳಿಕೋರರು ನಮ್ಮ ಸಂಪತ್ತನ್ನು ಹೊತ್ತೊಯ್ದರೆ ಹೊರತು ಸನಾತನ ಧರ್ಮದ ಮೌಲ್ಯಗಳು, ಸಿದ್ಧಾಂತ ಅಥವಾ ಸಂಸ್ಕೃತಿಯನ್ನು ನಾಶ ಮಾಡಲು ಸಾದ್ಯವಾಗಲಿಲ್ಲಾ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ಗೆ ಟಾಂಗ್ ನೀಡಿದ್ದಾರೆ.

ಒಡೆದು ಅಳುವ ನೀತಿಯನ್ನು ದೇಶದಲ್ಲಿ ಕಾಂಗ್ರೆಸ್-ಡಿಎಂಕೆ ಸೇರಿದಂತ ಹಲವು ವಿದೇಶಿ ಪ್ರೇರಿತ ಶಕ್ತಿಗಳು ಮೊದಲಿನಿಂದಲೂ ಪಾಲಿಸಿಕೊಂಡು ಬರುತ್ತಿದೆ. ಇತ್ತೀಚಿನ ದಿನದಲ್ಲಿ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ನಡೆದ ಡಿಸ್ ಮ್ಯಾಂಟಲಿಂಗ್ ಆಫ್ ಗ್ಲೋಬಲ್ ಹಿಂದುತ್ವ (ಸನಾತನ ಧರ್ಮವನ್ನು ನಾಶ ಪಡಿಸುವ ಸಂಚು) ಸಭೆಗಳಲ್ಲಿ ಭಾರತದ ಅನೇಕ ಸಾಹಿತಿ, ಲೇಖಕರು, ಸ್ವಘೋಷಿತ ಬುದ್ದಿ ಜೀವಿಗಳು ಭಾಗವಹಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿವೆ ಎಂದು ಆರೋಪಿಸಿದ್ದಾರೆ.