ಹಗರಿಬೊಮ್ಮನಹಳ್ಳಿ ತಾಲೂಕು ಆಡಳಿತ ಸೌಧದಲ್ಲಿ ಬಳ್ಳಾರಿ ಸಂಸದ ಈ.ತುಕಾರಾಂ ನೇತೃತ್ವದಲ್ಲಿ ತ್ರೈಮಾಸಿಕ ಸಭೆ ನಡೆಯಿತು. ಶಾಸಕರಾದ ಕೆ.ನೇಮಿರಾಜ ನಾಯ್ಕ, ಎಂ.ಪಿ.ಲತಾ ಮಲ್ಲಿಕಾರ್ಜುನ, ಡಾ.ಶ್ರೀನಿವಾಸ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹಾಗೂ ಜಿಪಂ. ಸಿಇಒ ಅಹಮದ್ ಅಕ್ರಮ್ ಅಲಿ ಷಾ ಇತರರಿದ್ದರು. 
ಜಿಲ್ಲೆ

ಹೆದ್ದಾರಿ ಅಭಿವೃದ್ಧಿಗೆ 54.8 ಕೋಟಿ ರೂ. ಬಿಡುಗಡೆ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ಉಸಿರು ಇರುವಾಗಲೇ ಹೆಸರು ಉಳಿಯುವಂತಹ ಕೆಲಸಮಾಡೋಣ ಎಂದು ಬಳ್ಳಾರಿ ಸಂಸದ ಈ.ತುಕಾರಾಂ ಅಧಿಕಾರಿಗಳಿಗೆ ಕರೆ ನೀಡಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ತ್ರೈಮಾಸಿಕ ಪರಿಶೀಲನಾ ದಿಶಾ ಸಭೆಯಲ್ಲಿ ಮಾತನಾಡಿದರು.

ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ತೋರದೆ, ಸಾರ್ವಜನಿಕ ಸೇವೆ ಮಾಡಲು ಬಂದ ನಾವುಗಳು ಅಚ್ಚುಕಟ್ಟಾಗಿ ಮಾಡಬೇಕು. ವಿಜಯನಗರ ಜಿಲ್ಲೆಯಿಂದ ಆರಂಭವಾಗುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 54.8 ಕೋಟಿ ರೂ. ಯೋಜನೆಯನ್ನು ಕೈಗೊಳ್ಳಲು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅನುದಾನ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಸ್ ಸೆಲ್ಟರ್‌ಗಳನ್ನು ನಿರ್ಮಿಸಬೇಕು. ಬೈಪಾಸ್ ರಸ್ತೆಗಳು, ಫುಟ್‌ಪಾತ್‌ಗಳು ಕ್ರಮಬದ್ಧವಾಗಿ ಆಗಬೇಕು ಎಂದು ಸೂಚಿಸಿದರು.

ಜಿಲ್ಲಾ ಉಪ ನಿರ್ದೇಶಕ ಶರಣಪ್ಪ ಮಾತನಾಡಿ, ಈಗಾಗಲೇ 2.16ಲಕ್ಷ ಕುಟುಂಬಗಳ ಬೆಳೆಹಾನಿ ವಿಮೆಯಲ್ಲಿ 1.40ಲಕ್ಷ ಕುಟುಂಬಗಳಿಗೆ ಸೌಲಭ್ಯ ತಲುಪಿಸಲಾಗಿದೆ. ಉಳಿದವರಿಗೆ ತ್ವರಿತವಾಗಿ ತಲುಪಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 13ಜನ ಸಾಲಬಾಧೆಯಿಂದ ಆತ್ಮಹತ್ಯೆಮಾಡಿಕೊಂಡಿದ್ದಾರೆ. 12ಜನರಿಗೆ ಪರಿಹಾರ ನೀಡಲಾಗಿದೆ ಎಂದರು. ಶಾಸಕ ಕೆ.ನೇಮಿರಾಜ ನಾಯ್ಕ ಮಾತನಾಡಿ, ಬೆಳೆ ವಿಮೆ ಮಧ್ಯವರ್ತಿಗಳು, ದಲ್ಲಾಳಿಗಳ ಪಾಲಾಗುತ್ತಿದೆ. ಅತ್ಯಂತ ಕಠಿಣವಾಗಿ ನಿರ್ವಹಿಸಿದರೆ ಮಾತ್ರ ನಿಜವಾದ ರೈತರಿಗೆ ಸೌಲಭ್ಯ ದೊರೆಯಲು ಸಾಧ್ಯ ಎಂದರು.

ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಅಂಗನವಾಡಿಗಳಿಗೆ ಪೂರೈಸುವ ಬೆಲ್ಲ ಕಳಪೆಯಿಂದ ಕೂಡಿರುತ್ತದೆ ಸರಾಯಿ, ಹೆಂಡ ತಯಾರಿಕೆಯ ಬೆಲ್ಲ ಮಕ್ಕಳಿಗೆ ಪೂರೈಕೆ ಆಗುತ್ತಿದೆ ಎಂದು ಆರೋಪಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಧ್ವನಿಗೂಡಿಸದ ಶಾಸಕ ನೇಮಿರಾಜ ನಾಯ್ಕ ಆಹಾರ ಸಂಪೂರ್ಣ ಕಳಪೆಯಿಂದ ಕೂಡಿರುತ್ತದೆ ಎಂದರು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಧ್ಯಪ್ರವೇಶಿಸಿ, ಆಹಾರ ಸರಬರಾಜು ಮಾಡುವ ಟೆಂಡರ್‌ದಾರರಿಗೆ ನೋಟಿಸ್ ನೀಡಿ, ಬ್ಲ್ಯಾಕ್‌ಲೀಸ್ಟ್‌ಗೆ ಸೇರಿಸಲಾಗುವುದು ಎಂದರು.

ಶಿಕ್ಷಣ ಇಲಾಖೆ ಕಳೆದ ಬಾರಿ ಕಲ್ಯಾಣ ಕರ್ನಾಟಕದಲ್ಲಿ ಹಗರಿಬೊಮ್ಮನಹಳ್ಳಿ ಪ್ರಥಮ ಸ್ಥಾನ ಪಡಿದಿದ್ದನ್ನು ಶ್ಲಾಘಿಸಿದ ಸಂಸದ, ಬಿಇಒ ಮೈಲೇಶ ಬೇವೂರ್ ಕುರಿತು, ಎಸ್‌ಎಸ್‌ಎಲ್‌ಸಿಯಲ್ಲಿ ಟಾಫರ್ ಆಗಲು ತಾವು ಪೂರೈಕೆ ಮಾಡಿದ ಪುಸ್ತಕಗಳ ಮುದ್ರಿಸಿ ಪೂರೈಸಬೇಕು ಎಂದರು.

ಆರೋಗ್ಯ ಇಲಾಖೆ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಶಂಕರ್‌ನಾಯ್ಕ ತ್ರೈಮಾಸಿಕ ಸಭೆಗೆ ಉತ್ತಮವಾಗಿ ವರದಿ ತಯಾರಿಸಿ ನೀಡಿದ್ದಾರೆ ಎಂದು ಸಂಸದರು ಮತ್ತು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಮಹಮದ್ ಅಕ್ರಮ್ ಅಲಿ ಷಾ ಪ್ರಶಂಸೆ ವ್ಯಕ್ತಪಡಿಸಿದರು.

ಕೂಡ್ಲಿಗಿಯಲ್ಲಿ ರೇಷ್ಮೆ ಕೈಗಾರಿಕೆ ತೆರೆಯುವ ಆಲೋಚನೆ ಇದ್ದು, ಬೇರೆ ಘಟಕಗಳಿಗೆ ಭೇಟಿ ನೀಡಿ ಅವಶ್ಯ ಇರುವ ಯೋಜನೆಯನ್ನು ರೂಪಿಸಿ ಎಂದು ಜಿಲ್ಲಾ ನಿರ್ದೇಶಕ ಸುಧೀರ್‌ಗೆ ಸಂಸದರು ಸೂಚಿಸಿದರು.

ಜಿಲ್ಲೆಯಲ್ಲಿ ಸ್ಮಶಾನ ನಿವೇಶನಕ್ಕೆ ಕೊರತೆ ಇರುವ ಕಡೆ ಗಮನ ಹರಿಸಿ, ಆಯಾ ತಹಸೀಲ್ದಾರ್‌ಗಳನ್ನು ಕರೆದುಕೊಂಡು ಯಾವುದೇ ಗ್ರಾಮಸ್ಥರಿಗೆ ತೊಂದರೆ ಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಶಾಸಕ ಡಾ.ಶ್ರೀನಿವಾಸ ಮಾತನಾಡಿ, ನರೇಗಾ ಯೋಜನೆಯಲ್ಲಿ ಸ್ಮಶಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿದ್ದ ಎಲ್ಲಾ ತಾಪಂ ಇಒಗಳಿಗೆ ನಿರ್ದೇಶನ ನೀಡಿದರು. ಮೀನುಗಾರಿಕೆಯ ಮಲ್ಲೇಶ, ತೋಟಗಾರಿಕೆಯ ಚಿದಾನಂದ, ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಅಭಿವೃದ್ಧಿ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹಬೊ ಹಳ್ಳಿ ಪುರಸಭೆ ಅಧ್ಯಕ್ಷ ಮರಿ ರಾಮಪ್ಪ, ಮರಿಯಮ್ಮನಹಳ್ಳಿ ಪಪಂ ಅಧ್ಯಕ್ಷ ಆದಿಮನಿ ಹುಸೇನ ಸಾಬ್, ತಹಸೀಲ್ದಾರ್ ಆರ್.ಕವಿತಾ, ತಾಪಂ ಇಒ ಡಾ.ಪರಮೇಶ್ವರ ಮತ್ತಿತರರು ಇದ್ದರು.