ಮೈಸೂರು: ಜನಸೇವಕನಾಗುವ ಬದಲು ಕಾರ್ಪೊರೇಟ್ ಕಿಂಕರನಂತೆ ಬಿಜೆಪಿ ವರ್ತಿಸುತ್ತಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಗದೀಶ್ ಸೂರ್ಯ ಟೀಕಿಸಿದರು.
ದೇಶದ ಪ್ರಜಾಪ್ರಭುತ್ವ ಆತಂಕದ ಕ್ಷಣಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಒಂದು ಅವಕಾಶವಾಗಿ ಜನರಿಗೆ ದೊರಕಿದೆ. ಅದನ್ನು ಮತದಾರರು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ಹತ್ತು ವರ್ಷಗಳಿಂದ ದೇಶದ ಜನರನ್ನು ಉನ್ಮಾದ ಸ್ಥಿತಿಯಲ್ಲಿ ಇಟ್ಟು ಎಲ್ಲವನ್ನೂ ಕಾರ್ಪೊರೇಟ್ ಕುಳಗಳಿಗೆ ಕೊಳ್ಳೆ ಹೊಡೆಯಲು ಅವಕಾಶ ಮಾಡಿಕೊಟ್ಟಿದೆ. ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು, ಅವುಗಳ ನ್ಯಾಯಬದ್ಧ ತೆರಿಗೆಯ ಪಾಲನ್ನು ನಿರಾಕರಿಸುವ ಮೂಲಕ ಕಡೆಗಣಿಸಲಾಗುತ್ತಿದೆ ಎಂದು ದೂರಿದರು.
ತೀವ್ರವಾದ ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಕಂಗೆಟ್ಟಿರುವ ದೇಶದ ಜನತೆಗೆ ಧರ್ಮದ ಆಫೀಮನ್ನು ನೀಡಿ ಅವರು ತಮ್ಮನ್ನು ಬಾಧಿಸುತ್ತಿರುವ ಸಮಸ್ಯೆಗಳಿಂದ ವಿಮುಖರನ್ನಾಗಿ ಮಾಡುತ್ತಿದೆ. ಸಂವಿಧಾನದಲ್ಲಿ ಅಳವಡಿಸಲಾದ ದೇಶದ ಬಹುತ್ವ ಸಂಸ್ಕೃತಿಯನ್ನು ಮಾನ್ಯ ಮಾಡದ, ಸಮಬಾಳಿನ ಸಮಪಾಲಿನ ಸಮಾಜವಾದಿ ಆಶಯಗಳನ್ನು ಒಪ್ಪದ ಬಿಜೆಪಿ ಪ್ರತಿಗಾಮಿ ಪಕ್ಷವಾಗಿದೆ ಎಂದು ಟೀಕಿಸಿದರು.
ಕೊಡಗು ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿ ರಮೇಶ್ ಮಾತನಾಡಿ, ಪ್ರಧಾನಿ ಮೋದಿ ದೇಶದ ಜನತೆಗೆ ‘ತಾನು ತಿನ್ನುವುದಿಲ್ಲ ಮತ್ತು ತಿನ್ನಲು ಬಿಡುವುದಿಲ್ಲ’, ‘ಕಪ್ಪು ಹಣ ಬಯಲಿಗೆಳೆಯುತ್ತೇನೆ’ ಎಂದು ನೀಡಿದ ವಾಗ್ದಾನಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿರುವುದನ್ನು ಹಗರಣಗಳು ಸಾಬೀತು ಪಡಿಸುತ್ತವೆ ಎಂದರು.
ಮುಖಂಡರಾದ ನಾಗರಾಜ್, ಜಯರಾಂ, ಕೆ. ಬಸವರಾಜು, ಶಿವಪ್ಪ ಇದ್ದರು.