ಜಿಲ್ಲೆ

ಮತತಂತ್ರ ಬಿಜೆಪಿ ನವಸೂತ್ರ: ಕೋರ್ ಕಮಿಟಿ ಸಭೆಯಲ್ಲಿ ಕಮಲ ನಾಯಕರ ನಿರ್ಣಯ

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಂಗಳೂರು: ರಾಜರಾಜೇಶ್ವರಿ ನಗರಿ, ಶಿರಾ ವಿಧಾನಸಭೆ ಉಪಸಮರವನ್ನು ಗೆಲ್ಲುವ ವಿಶ್ವಾಸದಲ್ಲಿರುವ ಆಡಳಿತಾರೂಢ ಬಿಜೆಪಿ ಇದೇ ಹುಮ್ಮಸ್ಸಿನೊಂದಿಗೆ ಗೋಹತ್ಯೆ, ಮತಾಂತರ ನಿಷೇಧದಂಥ ಕಠಿಣ ಕಾಯ್ದೆಗಳ ಬಲ ಹಾಗೂ ಕೇಂದ್ರ, ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಪ್ರಬಲಾಸ್ತ್ರಗಳೊಂದಿಗೆ ರಾಜ್ಯದ ಮುಂದಿನ ಎಲ್ಲ ಚುನಾವಣೆಗಳನ್ನು ಎದುರಿಸುವ ಸಂಕಲ್ಪ ಮಾಡಿದೆ.

ಕಮಲ ಪಡೆಗೆ ಗಟ್ಟಿನೆಲೆಯಾಗಿರುವ, ಕಡಲ ಕಿನಾರೆಯ ನಗರ ಮಂಗಳೂರಿನಲ್ಲಿ ಗುರುವಾರ ನಡೆದ ರಾಜ್ಯ ಪ್ರಮುಖರ ಸಮಿತಿ (ಕೋರ್ ಕಮಿಟಿ) ಸಭೆಯಲ್ಲಿ ಸಂಘಟನೆ ಬಲವರ್ಧನೆ ಜತೆಯಲ್ಲೇ ಮುಂಬರುವ ಚುನಾವಣೆಗಳಿಗೆ ರಣವ್ಯೂಹ ರಚಿಸುವುದಕ್ಕೆ ಪ್ರಾಮುಖ್ಯತೆ ನೀಡಿ ಸುದೀರ್ಘ ಚರ್ಚೆಯಾಯಿತು.

ಸಾಧಕ-ಬಾಧಕ ವಿಸõತ ಚರ್ಚೆಯ ಬಳಿಕ ನಿಷ್ಠುರ ನಡೆ, ನಿರ್ದಾಕ್ಷಿಣ್ಯ ನೀತಿ ಮತ್ತು ಜನರ ವಿಶ್ವಾಸ ಗಳಿಸುವ ಕ್ರಮಗಳ ಮೂಲಕ ರಾಜ್ಯದಲ್ಲಿ ಸಂಘಟನೆಯನ್ನು ಗ್ರಾಮೀಣ ಮಟ್ಟದಲ್ಲಿಯೂ ಗಟ್ಟಿಗೊಳಿಸಬಹುದು. ಆ ಮೂಲಕ ಮುಖಂಡರು ಮತ್ತು ಕಾರ್ಯಕರ್ತರ ಪರಿಶ್ರಮದ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವೆಂಬ ದೃಢ ನಿಲುವು ತಳೆದಿದೆ.

ಜಾತಿ, ಹಣ ಬಲ ಇಲ್ಲ: ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗಳು, ಗ್ರಾಮ ಪಂಚಾಯಿತಿ ಸೇರಿದಂತೆ ಪಂಚಾಯಿತಿ ಸಂಸ್ಥೆಗಳಿಗೆ ನಡೆಯಬೇಕಾಗಿರುವ ಚುನಾವಣೆ, ಬಿಬಿಎಂಪಿ ಚುನಾವಣೆಯನ್ನು ಪಕ್ಷದ ಕಾರ್ಯಕ್ರಮಗಳ ಆಧಾರದಲ್ಲಿ ನಡೆಸಬೇಕೆ ಹೊರತು ಜಾತಿ ಮತ್ತು ಹಣ ಬಲಕ್ಕೆ ಆದ್ಯತೆ ನೀಡಬಾರದೆಂಬ ನಿಲುವಿಗೆ ಬರಲಾಗಿದೆ. ಜಾತಿ-ಹಣ ಬಲದಿಂದ ಚುನಾವಣೆ ಎದುರಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಸಮಾಜ ಮತ್ತು ಪಕ್ಷದ ಹಿತದೃಷ್ಟಿ, ಸಕಾರಾತ್ಮಕ ಚಿಂತನೆ ಹಾಗೂ ರಚನಾತ್ಮಕ ಕ್ರಮಗಳು, ತತ್ವ-ಸಿದ್ಧಾಂತಗಳಿಗೆ ಒಗ್ಗುವುದೂ ಇಲ್ಲ. ಆರೋಗ್ಯಪೂರ್ಣ ಸಮಾಜ ಮತ್ತು ಪ್ರಜಾಸತ್ತೆ ಬಲಪಡಿಸಲೆಂದು ಜಾತಿ, ಹಣ ಗೌಣವಾಗಿಸುವುದು ಅಷ್ಟೇ ಮುಖ್ಯವೆಂಬ ಅಂಶಕ್ಕೆ ಸಭೆ ಒಮ್ಮತದ ಅಂಕಿತ ಹಾಕಿದೆ. ಸರ್ಕಾರ ಇವೆರಡು ಕಾಯ್ದೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದರೆ ಭರವಸೆಯ, ದಿಟ್ಟ ನಿಲುವಿನ ಪಕ್ಷವೆಂದು ಜನರ ಗಮನಸೆಳೆಯಲಿದೆ.

ಅಲ್ಲದೆ, ಬಹುಮತದ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ಮತಗಳಾಗಿ ಪರಿವರ್ತಿಸುವುದಕ್ಕೂ ನೆರವಾಗಲಿದೆ ಎನ್ನುವುದು ಕೋರ್ ಕಮಿಟಿ ಕೈಗೊಂಡ ನಿರ್ಣಯದ ತಿರುಳಾಗಿದೆ.

ಸರ್ಕಾರದ ಅಭಿವೃದ್ಧಿ ಯೋಜನೆ, ಜನಪರ ಕಾರ್ಯಕ್ರಮಗಳು, ದೂರದೃಷ್ಟಿಯ ಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯಲು ನಿರ್ಧರಿಸಿದ್ದು, ಇಂತಹ ಕಾರ್ಯವಿಧಾನದಿಂದ ಕಾರ್ಯಕ್ರಮಗಳ ಲಾಭ ಜನರಿಗೆ ದೊರೆತು ಪಕ್ಷ ಹತ್ತಿರವಾಗಲಿದ್ದು, ಸಂಘಟನೆ ಬಲವರ್ಧನೆಗೆ ನೆರವಾಗಲಿದೆ ಎಂಬುದು ಕೋರ್ ಕಮಿಟಿ ನಿಲುವಾಗಿದೆ.

ಕಾರ್ಯಕರ್ತರಿಗೆ ಅಧಿಕಾರ

ಪಕ್ಷ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆದರೂ ಕಾರ್ಯಕರ್ತರಿಗೆ ಅಧಿಕಾರ ಸಿಕ್ಕಿಲ್ಲ. ಆದ್ದರಿಂದ ಕೂಡಲೇ ನಿಗಮ ಮತ್ತು ಮಂಡಳಿಗಳಿಗೆ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ತೀರ್ವನವಾಗಿದೆ.

ಶಾಸಕರಿಗೆ ನೆರವು

ಪಕ್ಷ ಅಧಿಕಾರದಲ್ಲಿರುವಾಗ ಪಕ್ಷದ ಶಾಸಕರು ತಮ್ಮ ಕ್ಷೇತ್ರಗಳನ್ನು ಭದ್ರ ಮಾಡಿಕೊಳ್ಳಲು ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುವುದು, ಶಾಸಕರಲ್ಲಿ ಅಸಮಾಧಾನ ಉಂಟಾಗದಂತೆ ಎಚ್ಚರವಹಿಸುವ ಬಗ್ಗೆಯೂ ಚರ್ಚೆಯಾಗಿದೆ.

ಪರ್ಯಾಯ ತೆರಿಗೆ ಮೂಲ

ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ಮೂಲಗಳನ್ನು ಹುಡುಕಿಕೊಳ್ಳಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ.

ಬೇರೆ ಪಕ್ಷದವರಿಗೆ ಗಾಳ

ಸಂಘಟನೆಗೆ ಬಲ ಇಲ್ಲದ ಕಡೆಗಳಲ್ಲಿ ಬೇರೆ ಪಕ್ಷದ ಮುಖಂಡರನ್ನು ಕರೆತಂದು ಪಕ್ಷ ಬಲಪಡಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ಸಂಪುಟ ಸಸ್ಪೆನ್ಸ್

ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆದರೂ ಹೈಕಮಾಂಡ್ ಜತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಮಾಡುವಂತೆ ತಿಳಿಸಲಾಗಿದೆ.

ಪಂಚಾಯಿತಿ ಸಮರ

ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆ ಕೋರ್ ಕಮಿಟಿ ಸಭೆ ಒಲವು ತೋರಿಸಿದೆ. ಆದರೆ ಕರೊನಾ ಇರುವುದರಿಂದ ಕಾದು ನೋಡಿ ನಿರ್ಧಾರ ಮಾಡುವುದು ಒಳ್ಳೆಯದು ಎಂಬ ಚರ್ಚೆಯಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಚರ್ಚೆಯ ವಿಷಯಗಳು

  • ಲವ್ ಜಿಹಾದ್ ನಿಯಂತ್ರಣಕ್ಕೆ ಕಾಯ್ದೆ
  • ಗೋಹತ್ಯೆ ನಿಷೇಧ ಕಾಯ್ದೆ ಜಾರಿ
  • ಪಕ್ಷದ ಕಾರ್ಯಕ್ರಮಗಳ ಆಧಾರದಲ್ಲಿ ಸಂಘಟನೆಗೆ ಬಲ
  • ಹಣ ಹಾಗೂ ಜಾತಿಗಿಂತ ಸರ್ಕಾರದ ಕಾರ್ಯಕ್ರಮದ ಆಧಾರದಲ್ಲಿ ಚುನಾವಣೆ
  • ಮಸ್ಕಿಗೆ ಪ್ರತಾಪಗೌಡ ಪಾಟೀಲ್
  • ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಮಣೆ
  • ಬಸವಕಲ್ಯಾಣಕ್ಕೆ ಸ್ಥಳೀಯರ ಆಯ್ಕೆ, ಗ್ರಾಪಂ ನಿಂದ ಹಿಡಿದು ಎಲ್ಲ ಚುನಾವಣೆ ಗಂಭೀರವಾಗಿ ಪರಿಗಣಿಸುವುದು
  • ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ನೆರವು, ಸಂಪನ್ಮೂಲ ಸಂಗ್ರಹಣೆಗೆ ಪರ್ಯಾಯ ಮೂಲಗಳ ಕಡೆ ಗಮನ

ಪ್ರತಾಪ್​ಗೆ ಪಕ್ಕಾ

ಮಸ್ಕಿ ವಿಧಾನಸಭೆ ಉಪ ಚುನಾವಣೆಗೆ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್ ಹೆಸರು ಅಂತಿಮಗೊಳಿಸಿದ್ದು, ಈ ಕ್ಷೇತ್ರದ ಹಳೆಯ ಕಾರ್ಯಕರ್ತ ಬಸನಗೌಡ ತುರ್ವಿಹಾಳ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳಬೇಕು. ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಗೆ ಸ್ಥಳೀಯರನ್ನು ಕಣಕ್ಕಿಳಿಸಲು ಕೋರ್ ಕಮಿಟಿ ತೀರ್ವನಿಸಿದೆ.

ಸ್ಥಳೀಯರಿಗೆ ರಾಜ್ಯಸಭೆ

ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭೆಗೆ ಸಂಬಂಧಿಸಿದಂತೆ ವರಿಷ್ಠರಿರ ಸೂಚನೆ ಬಳಿಕ ಮತ್ತೊಂದು ಸುತ್ತಿನ ಸಭೆ ನಡೆಸಿ ನಿರ್ಧರಿಸಲಿದೆ. ಅಲ್ಲದೆ, ರಾಜ್ಯಸಭೆ ಒಂದು ಸ್ಥಾನವನ್ನು ಈಗಾಗಲೇ ಹೊರಗಿನವರಿಗೆ ಕೊಟ್ಟಿರುವ ಕಾರಣ ಸ್ಥಳೀಯರಿಗೆ ಮೀಸಲಿಡುವ ವಿಷಯವನ್ನು ದೆಹಲಿ ನಾಯಕರ ಗಮನಕ್ಕೆ ತರುವುದು, ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಪರಿಗಣಿಸಬೇಕು ಎಂದು ಒತ್ತಾಯಿಸುವ ಬಗ್ಗೆ ನಿರ್ಧರಿಸಿದೆ. ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಅಭ್ಯರ್ಥಿ ವಿಷಯ ಚರ್ಚೆಗೆ ಬರಲಿಲ್ಲವೆಂದು ಮೂಲಗಳು ಮಾಹಿತಿ ನೀಡಿವೆ.