ಬಿಜೆಪಿ ನೇಕಾರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ.ಎಸ್.ಸೋಮಶೇಖರ್ 
ಜಿಲ್ಲೆ

ನೇಕಾರ ಸಮಾಜಕ್ಕೆ ಬಿಜೆಪಿ ಕೊಡುಗೆ:ಸೋಮಶೇಖರ್

ನವೀನ ಬಿ.ಎಂ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಜಿಲ್ಲೆಯ ನೇಕಾರರು ಬೆಂಬಲಿಸಬೇಕು ಎಂದು ಬಿಜೆಪಿ ನೇಕಾರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ.ಎಸ್.ಸೋಮಶೇಖರ್ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷದಲ್ಲಿ ಕಪ್ಪುಚುಕ್ಕೆ ಇಲ್ಲದೆ ಅಧಿಕಾರ ಮಾಡಿ, ದಕ್ಷ ಆಡಳಿತ ನೀಡಿದ್ದಾರೆ. ನೇಕಾರ ವೃತ್ತಿ ಗುರುತಿಸಿ 2015ರ ಆ.7ರಂದು ಕೈಮಗ್ಗ ದಿನಾಚರಣೆ ಘೋಷಿಸಿ ಉದ್ಘಾಟನೆ ಮಾಡಿದ್ದಾರೆ. ಇನ್ನೂ ಅನೇಕ ನೇಕಾರ ವೃತ್ತಿಯೂ ಅಭಿವೃದ್ಧಿ ಪಥದತ್ತ ಸಾಗಲು ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಆರ್ಟಿಕಲ್ 370 ರದ್ದು, ದೇಶದ ಆರ್ಥಿಕ ಸ್ಥಿತಿಯನ್ನು 5ನೇ ಸ್ಥಾನಕ್ಕೆ ಏರಿಸಿರುವುದು, ದೇಶದಲ್ಲಿದ್ದ 74 ವಿಮಾನ ನಿಲ್ದಾಣಗಳನ್ನು 140ಕ್ಕೆ ಏರಿಸಿ ಅಭಿವೃದ್ಧಿ ಪಡಿಸಿದ್ದಾರೆ. ನೇಕಾರ ಸಮುದಾಯದ ಕೆ.ನಾರಾಯಣ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಹಾಗೂ ವಿ.ಕೇಶವಪ್ರಸಾದ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಬಿಜೆಪಿ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.
ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ನೇಕಾರರ ಸಾಲಮನ್ನಾ, ದೇವರ ದಾಸಿಮಯ್ಯ ಜಯಂತಿ ಘೋಷಣೆ ಮಾಡಿದ್ದು, ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನೇಕಾರ ಅಭಿವೃದ್ಧಿ ನಿಗಮ ಘೋಷಣೆ ಮಾಡಿ ಪ್ರತಿ ಜಿಲ್ಲೆಯಲ್ಲೂ ಟೆಕ್ಸ್‌ಟೈಲ್ ಪಾರ್ಕ್‌ಗಳನ್ನು ತೆರೆಯಲು ಆದೇಶ ಮಾಡಿದ್ದರು ಎಂದರು.
ಪ್ರಮುಖರಾದ ಎಂ.ಡಿ.ಮೂರ್ತಿ, ವಿಶ್ವನಾಥ್, ಟಿ.ರಾಜೇಶ್, ತೋಟಪ್ಪ ಶೇಖರ್, ದಯಾನಂದ ಶೆಟ್ಟಿಗಾರ್, ಪ್ರಭಾಕರ್, ಕಾಂತರಾಜ್ ಸುದ್ದಿಗೋಷ್ಠಿಯಲ್ಲಿದ್ದರು.