ವಿಜಯವಾಣಿ ಸುದ್ದಿಜಾಲ ಧಾರವಾಡ
`ಪಾಲಿಕೆಯ ಕಾಯಂ ನೌಕರಸ್ಥರು ಮತ್ತು ಹೊರಗುತ್ತಿಗೆ ನೌಕರರಿಗೆ ವೇತನ ನೀಡಿಲ್ಲ. ಸುಮಾರು 49 ಕೋಟಿ ರೂಪಾಯಿ ವೇತನ ಅನುದಾನ ಬಾಕಿ ಇದೆ. ಸಾಮಾನ್ಯ ನಿಧಿಯನ್ನು ವೇತನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ರಾಜ್ಯ ಸರ್ಕಾರಕ್ಕೆ ಧಿಕ್ಕಾರ... ಶೇಮ್, ಶೇಮ್'.
ಹೀಗೆ ಪಾಲಿಕೆಯ ಆಡಳಿತಾರೂಢ ಬಿಜೆಪಿ ಸದಸ್ಯರು ಪ್ರತಿಭಟಿಸಿದ ಪ್ರಸಂಗ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು. ನಗರದ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಸಭಾಭವನದಲ್ಲಿ ಶುಕ್ರವಾರ ನಡೆದ ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಅಕ್ಷರಶಃ ಪ್ರತಿಭಟನೆಯ ಸ್ಥಳದಂತಾಗಿತ್ತು. ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರೆ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಧಿಽಕ್ಕಾರ ಕೂಗುತ್ತ ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಶೂನ್ಯ ವೇಳೆಯಲ್ಲಿ ಸದಸ್ಯರಾದ ಶಿವು ಹಿರೇಮಠ, ವೀರಣ್ಣ ಸವಡಿ ನೌಕರರ ವೇತನ ಬಾಕಿ ವಿಷಯ ಪ್ರಸ್ತಾಪಿಸಿದರು. ಪ್ರತಿಕ್ರಿಯಿಸಿದ ಅಽಕಾರಿಗಳು ಪ್ರಸಕ್ತ ವರ್ಷ ಸರ್ಕಾರಕ್ಕೆ 70 ಕೋಟಿ ರೂ. ವೇತನಾನುದಾನ ಬರಬೇಕಿತ್ತು. 60 ಕೋಟಿ ರೂ. ಬಂದಿದೆ. ಬಾಕಿ ಹಣವನ್ನು ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸಿದೆ ಎಂದರು.
ಸಾಮಾನ್ಯ ನಿಽಯನ್ನು ವೇತನಕ್ಕೆ ಪಾವತಿಸಿದ್ದೇವೆ ಎನ್ನುತ್ತಿದ್ದಂತೆ ಕೆರಳಿದ ಬಿಜೆಪಿ ಸದಸ್ಯರು, ಸರ್ಕಾರ ಪಾಲಿಕೆಯ 240 ಕೋಟಿ ರೂ. ಅನುದಾನ ಬಾಕಿ ಉಳಿಸಿಕೊಂಡಿದೆ. ಸಾಮಾನ್ಯ ನಿಽಯನ್ನು ವೇತನಕ್ಕೆ ಬಳಸಿದರೆ ಅಭಿವೃದ್ಧಿ ಕೆಲಸಗಳು ಗತಿ ಏನು? ಈ ಅಽಕಾರ ಕೊಟ್ಟವರಾರು? ಪಾಲಿಕೆಯ ಕಾಮಗಾರಿ ಮಾಡಿರುವ ಗುತ್ತಿಗೆದಾರರಿಗೆ 2- 3 ವರ್ಷಗಳಿಂದ ಹಣ ಪಾವತಿಸಿಲ್ಲ. ಹೀಗಾಗಿ ಯಾರೂ ಟೆಂಡರ್ ಹಾಕಲು ಬರುತ್ತಿಲ್ಲ ಎಂದು ವೀರಣ್ಣ ಸವಡಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದಿಂದ ಸ್ಪಂದನೆ ಇಲ್ಲ:
ಮೇಯರ್ ರಾಮಪ್ಪ ಬಡಿಗೇರ ಮಾತನಾಡಿ, ಸರ್ಕಾರದಿಂದ ಪಾಲಿಕೆಗೆ 303 ಕೋಟಿ ರೂ. ಅನುದಾನ ಬರಬೇಕು. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರನ್ನು ಅನೇಕ ಬಾರಿ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೂ ಪ್ರಯೋಜನವಾಗಿಲ್ಲ ಎಂದರು.
ಮೇಯರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ರಾಜಶೇಖರ ಕಮತಿ ಮಾತನಾಡಿ, ಸರ್ವಪಕ್ಷ ನಿಯೋಗ ತೆರಳಲು ನಿರ್ಧರಿಸಲಾಗಿತ್ತು. ಆದರೆ, ಕರೆದುಕೊಂಡು ಹೋಗದಿರುವುದು ನಿಮ್ಮದೇ ತಪ್ಪು. ಸರ್ಕಾರದ ಮೇಲೆ ತಪ್ಪು ಹೊರೆಸಬೇಡಿ ಎಂದರು. ಇದು ಬಿಜೆಪಿ- ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು.
ಉಭಯಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಧಿಕ್ಕಾರ ಕೂಗಿದರು. ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ ಎಂದರೆ, ಬಿಜೆಪಿ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಕೂಗಿದರು. ಮಧ್ಯಪ್ರವೇಶಿಸಿದ ಮೇಯರ್ `ಪಾಲಿಕೆಗೆ ಎಲ್ಲ ಪಕ್ಷಗಳಿಂದಲೂ ಅನ್ಯಾಯವಾಗಿದೆ. ಲೋಪ ಒಂದೇ ಸರ್ಕಾರದ ಅವಧಿಯದ್ದಲ್ಲ' ಎಂದು ಸಭೆ ಮುಂದೂಡಿದರು.