ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹಾಕಿದ ಹನುಮಾನ್ ಧ್ವಜವನ್ನು ಬಲವಂತವಾಗಿ ಕೆಳಗಿಳಿಸಿ ಅದೇ ಜಾಗದಲ್ಲಿ ರಾಷ್ಟ್ರಧ್ವಜ ಹಾರಿಸುವ ವೇಳೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡರು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್‌ಗೆ ದೂರು ಸಲ್ಲಿಸಿದರು.
ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಹಾಕಲಾಗಿದ್ದ ಹನುಮಾನ್ ಧ್ವಜವನ್ನು ಕೆರಗೋಡು ಗ್ರಾಮ ಪಂಚಾಯಿತಿ ಪಿಡಿಇ, ಮಂಡ್ಯ ಉಪವಿಭಾಧಿಕಾರಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಬಲವಂತವಾಗಿ ಇಳಿಸಿದ್ದಾರೆ. ಮಾತ್ರವಲ್ಲದೆ ರಾಷ್ಟ್ರಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜ ಸಂಹಿತೆಯ ರೀತಿ ನೀತಿ ರಿವಾಜುಗಳನ್ನು ಸಂಪೂರ್ಣ ಉಲ್ಲಂಘಿಸಿದ್ದಾರೆಂದು ಆರೋಪಿಸಿದರು.
ಹನುಮಾನ್ ಧ್ವಜ ಸಮಿತಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ನಾಡಧ್ವಜವನ್ನು ನ.1ರಂದು ಹಾಗೂ ಜ.26, ಆ.15 ರಂದು ಹಾರಿಸುವ ಬಗ್ಗೆ ಸ್ಪಷ್ಟತೆಯನ್ನು ಸಹ ನೀಡಿರುತ್ತಾರೆ. ಆದರೂ 40 ವರ್ಷದಿಂದ ಇದ್ದ ಧ್ವಜಸ್ತಂಭದ ಬಾವುಟವನ್ನು ಇಳಿಸಿರುವುದು ಹಿಂದು ಹಾಗೂ ರಾಷ್ಟ್ರ ಪ್ರೇಮಿಗಳಿಗೆ ಅಪಮಾನ ಮಾಡಿದ್ದಾರೆ. ಧ್ವಜಸ್ತಂಭದ ಮುಕ್ಕಾಲು ಭಾಗಕ್ಕೆ ತಿರಂಗವನ್ನು ಹಾರಿಸಲಾಗಿದೆ. ಧ್ವಜ ಹಾರಿಸುವ ಸಂದರ್ಭದಲ್ಲಿ ಕಾಲಿಗೆ ಚಪ್ಪಲಿ ಮತ್ತು ಶೂ ಧರಿಸಿರುತ್ತಾರೆ. ಧ್ವಜಾರೋಹಣ ಹಾಗೂ ಧ್ವಜ ಇಳಿಸುವಾಗ ನಿಯಮಾನುಸಾರ ರಾಷ್ಟ್ರೀಯ ಗೀತೆಯನ್ನು ಹಾಡಿರುವುದಿಲ್ಲ. ಜತೆಗೆ ತುತ್ತುರಿಯ ಶಬ್ಧ ಮಾಡಿರುವುದಿಲ್ಲ. ಧ್ವಜದ ಮಧ್ಯ ಹೂವಿನ ದಳಗಳನ್ನು ಹಾಕಿಲ್ಲ. ಮಧ್ಯಾಹ್ನದ ನಂತರ ಧ್ವಜ ಹಾರಿಸಿರುತ್ತಾರೆ. ಇವೆಲ್ಲವು ಧ್ವಜ ಸಂಹಿತೆ 2022ರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಹಾಗಾಗಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು. ಅಂತೆಯೇ ತೆರವುಗೊಳಿಸಿದ್ದ ಕೇಸರಿ ಧ್ವಜವನ್ನು ಮರುಸ್ಥಾಪನೆ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಚಂದ್ರು, ಶಿವಕುಮಾರ್, ವಿವೇಕ್, ಪ್ರಸನ್ನಕುಮಾರ್, ನವೀನ್ ಯಲಿಯೂರು ಇತರರಿದ್ದರು.