ಜಿಲ್ಲೆ

ಸರ್ಕಾರಿ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಪರ ಪ್ರಚಾರ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ದೂರು

ಕೆ.ಎನ್.ರಾಘವೇಂದ್ರ

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿರುವುದು ಕಾನೂನು ಬಾಹಿರವಾಗಿದೆ. ಹಾಗಾಗಿ ಸಮಾವೇಶದ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸುವಂತೆ ಬಿಜೆಪಿ ಕಾರ್ಯಕರ್ತರು ದೂರು ನೀಡಿದರು.

ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ಯಕರ್ತರು, ಕೇಂದ್ರ ಸ್ಥಾನಿಕ ಸಹಾಯಕಿ ರೋಹಿಣಿ ಅವರ ಮೂಲಕ ಸರ್ಕಾರದ ಮುಖ್ಯ ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದರು. ರಾಜ್ಯ ಸರ್ಕಾರವು ಜನರ ತೆರಿಗೆ ಹಣದಲ್ಲಿ ಗ್ಯಾರಂಟಿ ಸಮಾವೇಶ ಮಾಡಿದ್ದು ಅದನ್ನು ಪಕ್ಷ ಹಾಗೂ ಮಂಡ್ಯ ಲೋಕಸಭಾ ಘೋಷಿತ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು) ಪರ ಮತ ಯಾಚನೆ ಮಾಡಿದೆ ಎಂದು ಆರೋಪಿಸಿದರು.

ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಅಪರಾಧವಾಗಿದ್ದು, ಸರ್ಕಾರಿ ಹಣವನ್ನು ವ್ಯಕ್ತಿ ಪರ ಅಥವಾ ಪಕ್ಷದ ಪರ ಬಳಕೆ ಮಾಡಿಕೊಂಡಿದ್ದು ಸರಿಯಲ್ಲ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಈ ಕಾರ್ಯಕ್ರಮಕ್ಕೆ ವ್ಯಯ ಮಾಡಿರುವ ಹಣವನ್ನು ಸೇರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳ ವಿಧಾನಸಭಾ ಕ್ಷೇತ್ರದಲ್ಲಿಯೂ ಗ್ಯಾರಂಟಿ ಸಮಾವೇಶ ನಡೆಸುವ ಮೂಲಕ ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಜನರನ್ನು ಬ್ಲಾೃಕ್‌ಮೇಲ್ ಮಾಡಿ ಅಧಿಕಾರಿಗಳ ಮೂಲಕ ಕರೆಸಿಕೊಳ್ಳುತ್ತಿದ್ದಾರೆ. ಈ ರೀತಿ ಜನರಿಗೆ ಧಮ್ಕಿ ಹಾಕಿ ಕರೆಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಘುಗೌಡ, ಎಚ್.ಎ.ನಾಗರಾಜು, ಟಿ.ಆರ್.ಕೃಷ್ಣ, ಪ್ರಸನ್ನಕುಮಾರ್, ಗೋವಿಂದರಾಜು, ವೈರಮುಡಿ ಹಾಜರಿದ್ದರು.