ಮಂಡ್ಯ: ಸಂಸದ ಪ್ರಜ್ವಲ್ ರೇವಣ್ಣ ಸುಮಾರು 400 ಜನ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದರಲ್ಲಿ 16 ವರ್ಷದ ಅಪ್ರಾಪ್ತೆಯೂ ಇದ್ದಾಳೆ ಎಂದು ಹೇಳಿಕೆ ನೀಡಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ದೂರು ನೀಡಿದ್ದಾರೆ.
ಈ ಸಂಬಂಧ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಆನ್‌ಲೈನ್‌ನಲ್ಲಿ ದೂರು ನೀಡಿದ ಅವರು, ಶಿವಮೊಗ್ಗದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಹುಲ್‌ಗಾಂಧಿ ಅವರು ಪ್ರಜ್ವಲ್ ರೇವಣ್ಣ ಪ್ರಕರಣ ಪ್ರಸ್ತಾಪಿಸಿ ಅಪ್ರಾಪ್ತ ಹೆಣ್ಣು ಮಕ್ಕಳೂ ಇದರಲ್ಲಿ ಇದ್ದಾರೆ ಎಂದು ಹೇಳಿರುವುದರಿಂದ ಅವರ ಬಳಿ ವೀಡಿಯೋ ತುಣುಕುಗಳೂ ಇರಬಹುದು. ಹಾಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಅಲ್ಲದೆ 400 ಜನ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ಖರಾರುವಕ್ಕಾಗಿ ಹೇಳಿರುವುದರಿಂದ ಅವರನ್ನೂ ವಿಚಾರಣೆಗೆ ಒಳಪಡಿಸಿದರೆ ಮತ್ತಷ್ಟು ಮಾಹಿತಿ ದೊರೆಯಬಹುದು ಎಂದಿದ್ದಾರೆ.