ಜಿಲ್ಲೆ

ಮರಳು ಸಮಸ್ಯೆ ಬಗೆಹರಿಸಲು ಸಿಎಂಗೆ ಬಿಜೆಪಿ ನಿಯೋಗ ಮನವಿ

Mangaluru - Hariprasad Rai


ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಮರಳು ಅಭಾವ ಸೃಷ್ಟಿಯಾಗಿದ್ದು ಕೂಲಿ ಕಾರ್ಮಿಕರು ಸಹಿತ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಗ್ರಹಿಸಿದೆ.
ಕೆಂಪು ಕಲ್ಲು ಮತ್ತು ಮರಳಿನ ಪೂರೈಕೆಯಲ್ಲಿ ತೀವ್ರ ಅಭಾವವುಂಟಾಗಿ ಗೃಹ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿದೆ. ಇದು ಜಿಲ್ಲೆಯ ಆರ್ಥಿಕತೆಗೂ ಹೊಡೆತ ನೀಡಿದ್ದು, ಸಾವಿರಾರು ಕಾರ್ಮಿಕರ ಬದುಕು ದುಸ್ತರಗೊಂಡಿದೆ. ಈ ಬಗ್ಗ ಎ ಮುಖ್ಯಮಂತ್ರಿಗಳು ಗಮನ ಹರಿಸಬೇಕೆಂದು ಬಿಜೆಪಿ ಜನಪ್ರತಿನಿಧಿಗಳು ವಿನಂತಿಸಿದರು.
ಕೇರಳದಲ್ಲಿ 1 ಟನ್ ಕಲ್ಲಿಗೆ ಕೇವಲ 32 ರೂ.ರಾಜಧನ ನಿಗದಿಯಾಗಿದ್ದರೆ ಅದೇ ಪ್ರಮಾಣದ ಕಲ್ಲಿಗೆ ಕರ್ನಾಟಕದಲ್ಲಿ 290 ರೂ.ರಾಜಧನ
ಸರ್ಕಾರ ನಿಗದಿಪಡಿಸಿರುವುದು ಅತ್ಯಂತ ಖೇದಕರ ವಿಷಯವಾಗಿದೆ. ಪೊಲೀಸ್, ಕಂದಾಯ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಲಂಚಕ್ಕೆ ಪೀಡಿಸುತ್ತಿದ್ದು, ಕೆಂಪು ಕಲ್ಲು ಕೋರೆ ಕಾರ್ಯವನ್ನು ಗಣಿ ಇಲಾಖೆ ವ್ಯಾಪ್ತಿಯಿಂದ ಹೊರಗಿರಿಸಿ ಸರಳೀಕೃತ ವ್ಯವಸ್ಥೆಯಲ್ಲಿ ಪರವಾನಿಗೆ ನೀಡುವಂತಾಗಬೇಕು. ಕರಾವಳಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ತಕ್ಷಣ ಜಾರಿ ಮಾಡಬೇಕು . ಪ್ರಾಕೃತಿಕವಾಗಿ ಲಭ್ಯವಾಗುವ ಮರಳನ್ನು ತೆಗೆದು ಸಾಗಿಸಿ ಕಟ್ಟಡ ನಿರ್ಮಾಣಕ್ಕೆ ಬಳಸುವುದನ್ನು ಪರವಾನಗಿ ನೀಡಲು ಸ್ಥಳೀಯಾಡಳಿತಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಬಿಜೆಪಿ ಜನಪ್ರತಿನಿಧಿಗಳು ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಗಣ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಕ್,ಹರೀಶ್ ಪೂಂಜಾ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ಎಂಎಲ್‌ಸಿಗಳಾದ ಪ್ರತಾಪ್‌ಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ ನಿಯೋಗದಲ್ಲಿದ್ದರು.