ಮಂಡ್ಯ: ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ನಾಯಕರಿಗೆ ಜೈಕಾರ ಕೂಗಿ ಸಂಭ್ರಮಿಸಿದರು. ಅಂತೆಯೇ ಕಸದ ಪೊರಕೆ ಹಿಡಿದು ರಸ್ತೆ ಗುಡಿಸುವ ಮೂಲಕ ಆಮ್ ಆದ್ಮಿ ಪಕ್ಷವನ್ನು ದೆಹಲಿಯಲ್ಲಿ ಧೂಳಿಪಟ ಮಾಡಲಾಗಿದೆ ಎಂದು ಘೋಷಣೆ ಕೂಗಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಭ್ರಷ್ಟಾಚಾರದ ನಿರ್ಮೂಲನೆ ಮಾಡುವುದಾಗಿ ಹಾಗೂ ಅಣ್ಣಾ ಹಜಾರೆ ಅವರ ಹೋರಾಟವನ್ನು ಹೈಜಾಕ್ ಮಾಡಿಕೊಂಡು ದೆಹಲಿಯಲ್ಲಿ ಎಎಪಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆದರೀಗ ಭ್ರಷ್ಚಾಚಾರದ ಕೊಳೆ ತೊಳೆಯುತ್ತೇವೇವೆಂದು ಪೊರಕೆಯನ್ನೇ ಚಿಹ್ನೆಯನ್ನಾಗಿಸಿಕೊಂಡ ಎಎಪಿ ಈಗ ತಾನೇ ಕಸವಾಗಿರುವುದು ವಿಪಯಾರ್ಸ. ಏಕೀಕೃತವಾದ ಏಕಸ್ವಾಮ್ಯಕ್ಕೆ ಬೆಲೆ ಇಲ್ಲ. ಅದೇನಿದ್ದರೂ ರಾಷ್ಟ್ರೀಯವಾದ ಮತ್ತು ರಾಷ್ಟ್ರೀಯ ಚಿಂತನೆಗೆ ಬೆಲೆ ಕೊಡುತ್ತಾರೆ ಎಂಬುದಕ್ಕೆ ದೆಹಲಿ ಚುನಾವಣೆಯೇ ದೊಡ್ಡ ಪಾಠ. ಒಂದೆಡೆ ಅಣ್ಣಾ ಹಜಾರೆ ಹೆಸರೇಳಿಕೊಂಡು ಪ್ರಖ್ಯಾತಿ ಪಡೆದು ಅಧಿಕಾರಕ್ಕೆ ಬಂದವರು ಅರವಿಂದ್ ಕೇಜ್ರಿವಾಲ್. ಅದೇ ರೀತಿ ಗಾಂಧೀಜಿ ಅವರ ಸತ್ಯಾಗ್ರಹವನ್ನು ಹೈಜಾಕ್ ಮಾಡಿ ಅಧಿಕಾರಕ್ಕೆ ಬಂದಿದ್ದು ನಕಲಿ ಗಾಂಧಿ ವಂಶ. ಈಗ ಆ ಎರಡೂ ಪಕ್ಷಕ್ಕೂ ದೆಹಲಿ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
ಮುಖಂಡರಾದ ರಾ.ಶಿ.ಸಿದ್ದರಾಜುಗೌಡ, ನಾಗಣ್ಣ ಮಲ್ಲಪ್ಪ, ವಿವೇಕ್, ಶಿವಕುಮಾರ್ ಆರಾಧ್ಯ, ಚಂದ್ರು, ಹೊಸಹಳ್ಳಿ ಶಿವು, ಅರವಿಂದ್, ಮಹಾಂತಪ್ಪ, ವಿನೋಭ, ನಾಗಾನಂದ್, ನರಸಿಂಹ, ಶಿವಣ್ಣ, ಪುಟ್ಟಸ್ವಾಮಿ, ಶಿವಕುಮಾರ್, ಪ್ರಸನ್ನ, ಯೋಗೇಶ್, ನಂದೀಶ್ ಇತರರಿದ್ದರು.