ಪ್ರಶಾಂತ ಭಾಗ್ವತ ಉಡುಪಿ
ನಿರೀಕ್ಷೆಯಂತೆಯೇ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲುವಿನ ನಗೆ ಬೀರಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ನ ಅಭ್ಯರ್ಥಿ, ಪ್ರಭಾವಿ ರಾಜಕಾರಣಿ ಕೆ.ಜಯಪ್ರಕಾಶ್ ಹೆಗ್ಡೆ ವಿರುದ್ಧ 2,58,903 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿ ದೇಶದ ಗಮನ ಸೆಳೆದಿದ್ದಾರೆ.
1993ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಪ್ರಥಮ ಹೆಜ್ಜೆಯಿಟ್ಟ ಪೂಜಾರಿ, ಇದೀಗ ಪಾರ್ಲಿಮೆಂಟ್ ಮೆಟ್ಟಿಲೇರಲು ದಾಪುಗಾಲು ಇಟ್ಟಿದ್ದಾರೆ. ತನ್ನ ಸರಳ ಹಾಗೂ ಸಾಮಾನ್ಯ ವ್ಯಕ್ತಿತ್ವದಿಂದಲೇ ಉಡುಪಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಗುರುತಿಸಿಕೊಂಡಿರುವ ಕೋಟ, ಲೋಕ ಸಮರದಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಂದು ಮೈಲಿಗಲ್ಲು ನೆಟ್ಟಿದ್ದಾರೆ.
ಉಡುಪಿ ತಾಲೂಕಿನ ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಕೋಟ ಗ್ರಾಮದಲ್ಲಿ ಕೃಷಿ ಕುಟುಂಬದ ಅಣ್ಣಪ್ಪ ಪೂಜಾರಿ ಹಾಗೂ ಲಚ್ಚಿ ಪೂಜಾರ್ತಿ ದಂಪತಿಯ ಮಗನಾಗಿ 1960ರ ಜನವರಿ 1ರಂದು ಶ್ರೀನಿವಾಸ ಜನಿಸಿದರು. ಪತ್ನಿ ಶಾಂತಾ, ಇಬ್ಬರು ಹೆಣ್ಣು (ಸ್ವಾತಿ, ಶುೃತಿ) ಮಕ್ಕಳು, ಓರ್ವ ಪುತ್ರ (ಶಶಿಧರ)ನನ್ನು ಹೊಂದಿರುವ ಪೂಜಾರಿ ಅವರದ್ದು ಸುಂದರ ಕುಟುಂಬ.
ಕೃಷಿ ಕುಟುಂಬದಲ್ಲಿ ಜನಿಸಿದ್ದರಿಂದ ಕೃಷಿಯೇ ಅವರ ಮುಖ್ಯ ವೃತ್ತಿಯಾಗಿತ್ತು. ಹೀಗಾಗಿ ಕೇವಲ 7ನೇ ತರಗತಿವರೆಗೆ ಮಾತ್ರ ಅವರು ಕಲಿತಿದ್ದರೂ ಸಹ ಸಾಹಿತ್ಯವೆಂದರೆ ಬಲು ಪ್ರೀತಿ. ಅನೇಕ ಲೇಖನಗಳನ್ನೂ ಅವರು ಬರೆದಿದ್ದು, ಛಾಯಾಗ್ರಹಣ ಅವರ ಅತ್ಯಂತ ಇಷ್ಟದ ಹವ್ಯಾಸವಾಗಿದೆ.
1993ರಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯನಾಗಿ ಗೆಲುವು ಸಾಧಿಸಿದ ಶ್ರೀನಿವಾಸ್ ಪೂಜಾರಿ, ಹಂತಹಂತವಾಗಿ ರಾಜಕೀಯದ ಒಂದೊದೇ ಮೆಟ್ಟಿಲು ಏರುತ್ತ ಸಾಗಿದರು. 1996ರಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾಗಿ ಚುನಾಯಿತರಾದರು. 2004ರಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರು. 2005ರಲ್ಲಿ ಜಿಲ್ಲಾ ಪಂಚಾಯಿತಿ ಸದ್ಯರಾಗಿ ಗೆಲುವು ಸಾಧಿಸಿದರಲ್ಲದೆ, ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿದ್ದರಿಂದ ಪಕ್ಷದಲ್ಲಿ ವಿವಿಧ ಹುದ್ದೆ ಅಲಂಕರಿಸಿದರು.
2008ರಲ್ಲಿ ಪ್ರಥಮ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡ ಪೂಜಾರಿ, 2012ರಲ್ಲಿ ರಾಜ್ಯ ಮುಜರಾಯಿ ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಗಮನ ಸೆಳೆದರು. 2016ರಲ್ಲಿ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡ ಕೋಟ, 2018ರಲ್ಲಿ ವಿಪ ವಿರೋಧ ಪಕ್ಷದ ನಾಯಕರಾಗಿಯೂ ಆಯ್ಕೆಯಾದರು. 2019ರಲ್ಲಿ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಮುಜರಾಯಿ, ಮೀನುಗಾರಿಕೆ, ಒಳನಾಡು ಬಂದರು ಮತ್ತು ಜಲಸಾರಿಗೆ ಸಚಿವರಾಗಿ ಆಯ್ಕೆಯಾಗಿದರು. 2021ರಲ್ಲಿ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವರಾಗಿ, ತನ್ನ ವಿಶಿಷ್ಟ ಶೈಲಿ ಕಾರ್ಯಗಳ ಮೂಲಕವೇ ರಾಜ್ಯದ ಗಮನ ಸೆಳೆದಿದ್ದರು. 2023ರಿಂದ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದರು.
ಉಡುಪಿ: ಕರ್ನಾಟಕದ ಕರಾವಳಿ ಭಾಗವಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಗೆದ್ದಿದ್ದು, ತನ್ಮೂಲಕ ಕರಾವಳಿ ಜಿಲ್ಲೆಗಳು ಹಿಂದುತ್ವದ ಭದ್ರಕೋಟೆ ಎಂಬುದನ್ನು ಜನರು ಸಾಬೀತು ಮಾಡಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಕೋಟ ಶ್ರೀನಿವಾಸ ಪೂಜಾರಿ ಅವರನ್ನು 2.59 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಈ ಕ್ಷೇತ್ರಗಳ ಜನತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿ ಭಾಗ್ಯ, ಹಿಂದು ವಿರೋಧಿ ನೀತಿಗೆ ದಿಟ್ಟ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 45 ಸಾವಿರ ಅಂತರದ ಮುನ್ನಡೆ ಲಭಿಸಿದ್ದು, ಮೋದಿ ನೇತೃತ್ವದ ಕೇಂದ್ರ ಸರ್ಕಾರದ 10 ವರ್ಷಗಳ ಸಾಧನೆಗೆ ಜನರು ಮನ್ನಣೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಸಮರ್ಥ ಸಂಸದರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಯಶ್ಪಾಲ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿಯ ವರಿಷ್ಠ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಬಿಜೆಪಿಯ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅದರಲ್ಲೂ ಬೂತ್ ಮಟ್ಟದ ಕಾರ್ಯಕರ್ತರಿಗೆ ನನ್ನ ಗೆಲುವು ಸಮರ್ಪಣೆ ಮಾಡುತ್ತೇನೆ. ಕೋಟ ಶ್ರೀನಿವಾಸ್ ಪೂಜಾರಿ. ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ.