ಕೋಟದ ಗಿಳಿಯಾರು ಶಾಂಭವಿ ಶಾಲೆಯ ಮತಗಟ್ಟೆ ಸಮೀಪದಲ್ಲಿ ಬಿಜೆಪಿ ಬೂತ್​ನಲ್ಲಿ ಕಾರ್ಯಕರ್ತರೊಂದಿಗೆ ಕುಳಿತಿದ್ದ ಕೋಟ ಶ್ರೀನಿವಾಸ್​ ಪೂಜಾರಿ. 
ಜಿಲ್ಲೆ

ಉಡುಪಿ-ಚಿಕ್ಕಮಗಳೂರಲ್ಲಿ ಅರಳಲಿದೆ ಕಮಲ

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ ವಿಶ್ವಾಸ -- ಬಿಜೆಪಿಯತ್ತ ಜನರ ಒಲವು

ವಿಜಯವಾಣಿ ಸುದ್ದಿಜಾಲ ಉಡುಪಿ
ಲೋಕಸಭಾ ಚುನಾವಣೆಯಲ್ಲಿ ಮತದಾರರ ಒಲವು ಬಿಜೆಪಿ ಪರ ಇರುವುದು ಕಂಡುಬಂದಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಮಲ ಅರಳುವ ವಿಶ್ವಾಸ ನನಗಿದೆ ಎಂದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಮತಗಟ್ಟೆಗಳಿಗೆ ಮಾಧ್ಯಮದವರು ಪ್ರದಣೆ ಹಾಕುವ ವೇಳೆ ಕೋಟದ ಗಿಳಿಯಾರು ಶಾಂಭವಿ ಶಾಲೆಯ ಮತಗಟ್ಟೆ ಸಮೀಪದಲ್ಲಿ ಬಿಜೆಪಿ ಕಾರ್ಯಕರ್ತರು ತೆರೆದಿದ್ದ ಬೂತ್​ನಲ್ಲಿ ಕುಳಿತಿದ್ದ ಅವರು ಮಾತನಾಡಿ, ಶಾಂತಿಯುತವಾಗಿ ಕ್ಷೇತ್ರದಲ್ಲಿ ಮತದಾನ ನಡೆದಿದೆ. ಜನರು ಸ್ವಯಂ ಪ್ರೇರಣೆಯಿಂದ ಹಕ್ಕು ಚಲಾಯಿಸಿದ್ದಾರೆ. ಮತದಾರರು ಈ ಬಾರಿ ಜಾಗೃತರಾಗಿದ್ದಾರೆ. ದೇಶದ ಭವಿಷ್ಯ ರೂಪಿಸುವವರ ಪರವಾಗಿ ಮತ ಚಲಾಯಿಸಿದ್ದಾರೆ ಎಂಬ ಅಚಲ ನಂಬಿಕೆ ನನಗಿದೆ. ಮತದಾರರು ನನ್ನ ಕೈ ಬಿಡಲಾರರು ಎಂದರು.

ಮತದಾನ ದಿನದ ಬೆಳಗ್ಗೆ ಕುಂದಾಪುರ ತಾಲೂಕಿನ 35ಕ್ಕೂ ಅಧಿಕ ಬೂತ್​ಗಳಿಗೆ ಭೇಟಿ ನೀಡಿದ್ದೇನೆ. ಮಧ್ಯಾಹ್ನದ ಬಳಿಕ ಉಡುಪಿ ತಾಲೂಕಿನ ಸಾಧ್ಯವಾದಷ್ಟು ಬೂತ್​ಗಳಿಗೆ ಭೇಟಿ ನೀಡುತ್ತೇನೆ. ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡುತ್ತಿಲ್ಲ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದೇನೆ ಎಂದರು.

ನುಡಿದಂತೆ ನಡೆದವರು ಶ್ರೀನಿವಾಸ ಶೆಟ್ಟಿ

ಬಿಜೆಪಿಯ ಮಾಜಿ ಶಾಸಕ ಹಾಲಾಡಿಯ ಶ್ರೀನಿವಾಸ ಶೆಟ್ಟಿ ಅವರು ನುಡಿದಂತೆ ನಡೆಯುವವರು. ಬಿಜೆಪಿಗೆ ಮತ ನೀಡುವುದಾಗಿ ಭರವಸೆ ನೀಡಿದ್ದಾರೆ. ಆ ಭರವಸೆಯಂತೆಯೇ ಅವರು ನಡೆದಿರುತ್ತಾರೆ ಎಂದು ಕೋಟ ತಿಳಿಸಿದರು.