ಅಂಕೋಲಾ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ, ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆಗೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ವಿನಂತಿಸಿದರು.
ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿಯ ಕಲ್ಲೇಶ್ವರ, ಸುಂಕಸಾಳ ಪಂಚಾಯಿತಿಯ ಹೆಬ್ಬುಳ, ಅಚವೆ ಪಂಚಾಯಿತಿಯ ಹೊಸಕಂಬಿ, ಸಗಡಗೆರಿಯ ದೇವಿಗದ್ದೆ, ಬೆಳಂಬರ, ಬೆಲೆಕೇರಿ, ಹಾರವಾಡ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಪ್ರಚಾರ ಸಭೆ ನಡೆಸಿ ಮಾತನಾಡಿದರು.
ನರೇಂದ್ರ ಮೋದಿಜಿ ಅವರನ್ನು ಮೂರನೆ ಬಾರಿ ಪ್ರಧಾನಿಯಾಗಿಸಲು ಜೈ ಶ್ರೀ ರಾಮ ಘೋಷಣೆಯ ಮೂಲಕ ಮೇ 7 ರಂದು ಕಮಲದ ಗುರುತಿಗೆ ಮತದಾನ ಮಾಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಮನವಿ ಮಾಡಿದರು.
ಮೋದಿಜೀ ಒಬ್ಬ ದೇವ ಮಾನವ, ವಿಶ್ವನಾಯಕ ಶಿರಸಿಗೆ ಬಂದ ಸಂದರ್ಭದಲ್ಲಿ ಶಾಲು ಹೊದಿಸಿ ರಾಮ ಮಂದಿರ ನಿರ್ಮಿಸಿ ಕೊಟ್ಟಿದಕ್ಕೆ ಮೋದಿಜೀ ಅವರಿಗೆ ಧನ್ಯವಾದಗಳನ್ನು ತಿಳಿಸಿದಾಗ ಅವರು ಭಾವುಕರಾದರು. 500 ವರ್ಷ ಹೋರಾಟದ ನಂತರ ರಾಮ ಮಂದಿರ ನಿರ್ಮಾಣವಾಗಿದೆ. ಅದಕ್ಕೆ ಪ್ರಧಾನಿಯವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆಗೆ ಬಿಜೆಪಿಯನ್ನು ಗೆಲ್ಲಿಸಬೇಕು. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವುದು ಸಾಬೀತಾಗಿದೆ. ಚುನಾವಣೆಗೆ ಕೆಲವೆ ದಿನಗಳು ಬಾಕಿ ಇದೆ. ಹಗಲಿರುಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸೋಣ. ನಮ್ಮ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸೋಣ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ನಮ್ಮ ಕೊಡುಗೆ ನೀಡೋಣ ಎಂದರು.
ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಅತ್ಯಂತ ಬರ್ಬರ ಕೃತ್ಯ. ಇದು ಖಂಡನೀಯವಾಗಿದೆ. ಅವರದೇ ಪಕ್ಷದ ಕಾಂಗ್ರೆಸ್ ನ ಕಾರ್ಪೊರೇಟರ್ ಮಗಳಿಗೆ ರಕ್ಷಣೆ ಕೊಡದ ಇವರು ಸಾಮಾನ್ಯರಿಗೆ ರಕ್ಷಣೆ ಕೊಡಲು ಸಾಧ್ಯವೇ ?, ಬದಲಿಗೆ ಆರೋಪಿಯ ಮನೆಗೆ ರಕ್ಷಣೆ ಕೊಡುವ ಕೆಲಸ ಮಾಡಿದ್ದಾರೆ.ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದು ಕಳವಳಕಾರಿ ಸಂಗತಿಯಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಕೊಟ್ಟು ಬೆಲೆ ಏರಿಕೆಯ ಬಿಸಿಯನ್ನು ಮುಟ್ಟಿಸಿದೆ. ಗ್ಯಾರಂಟಿ ಕೊಡುವುದಾದರೇ ಮಹಿಳೆಯರ ಜೀವಕ್ಕೂ ಗ್ಯಾರಂಟಿ ನೀಡಲಿ ಎಂದರು.
ಪರೇಶ ಮೇಸ್ತ ಕೇಸ್ ನಲ್ಲಿ ಕೂಡ ಕಾಂಗ್ರೆಸ್ ಎಲ್ಲಾ ಸಾಕ್ಷಿ ನಾಶ ಮಾಡಿ ನಂತರ ಸಿಬಿಐಗೆ ನೀಡಿತ್ತು. ವೋಟ್ ಬ್ಯಾಂಕ್ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಗೋಪಾಲ ಕೃಷ್ಣ ವೈದ್ಯ, ಬಿಜೆಪಿ ಪ್ರಮುಖರು, ರಾಜೇಂದ್ರ ನಾಯ್ಕ, ನಾಗರಾಜ ನಾಯಕ, ಸವಿತಾ ಬಾನಾವಳಿಕರ, ಜಗದೀಶ ನಾಯಕ ಮೊಗಟಾ, ಭಾಸ್ಕರ ನಾರ್ವೆಕರ, ಶ್ರೀಧರ ನಾಯ್ಕ ಹಾಗೂ ಸ್ಥಳೀಯ ಪ್ರಮುಖರು, ಪದಾಧಿಕಾರಿಗಳು, ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.