ಜಿಲ್ಲೆ

ಜನರ ಗಮನ ಬೇರೆಡೆ ಸೆಳೆದು ಬಿಜೆಪಿ ಮತಯಾಚನೆ: ಎಐಸಿಸಿ ವಕ್ತಾರ ಡಾ.ಅನ್ಷುಲ್ ಅವಿಜಿತ್ ಆರೋಪ

ಮೈಸೂರು: ರಾಮಮಂದಿರದಂತಹ ಭಾವನಾತ್ಮಕ ವಿಷಯ ಎತ್ತುತ್ತ ನಿರುದ್ಯೋಗ, ಬಡತನ, ಬೆಲೆ ಏರಿಕೆ ಮೊದಲಾದ ನೈಜ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆದು ಬಿಜೆಪಿ ಮತಯಾಚಿಸುತ್ತಿದೆ ಎಂದು ಎಐಸಿಸಿ ವಕ್ತಾರ ಡಾ.ಅನ್ಷುಲ್ ಅವಿಜಿತ್ ಕಿಡಿಕಾರಿದರು.
ಕಳೆದ ವಿಧಾನಸಭಾ ಚುನಾವಣೆ ವೇಳೆ 40 ಪರ್ಸೆಂಟ್ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ ಕೇಳಿತ್ತು. ಹೀಗಾಗಿ ಜನತೆ ಆಗಿನ ಬಿಜೆಪಿ ರಾಜ್ಯ ಸರ್ಕಾರವನ್ನು ಕಿತ್ತೊಗೆದರು. ಈಗ ಲೋಕಸಭಾ ಚುನಾವಣೆ ಬಂದಿದ್ದು, ಜನತೆ ಸಾಮಾಜಿಕ ನ್ಯಾಯದ ಪರವಾಗಿ ಇರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ನಮ್ಮ ಕಾಂಗ್ರೆಸ್ ಸರ್ಕಾರ ಎಲ್ಲ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಇದರಿಂದಾಗಿ ಜನತೆಗೆ ಬೆಲೆಯೇರಿಕೆ ಬಿಸಿ ತಟ್ಟದಂತಾಗಿದೆ. ಯುವನಿಧಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ. ಆದರೆ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸಹ ನಮ್ಮ ಗ್ಯಾರಂಟಿ ಪದ ಬಳಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈ ಲೋಕಸಭಾ ಚುನಾವಣೆ ವೇಳೆ ನಾವು ಸಾಮಾಜಿಕ ನ್ಯಾಯದ ವಿಷಯ ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇವೆ. ಆದರೆ ಬಿಜೆಪಿ ಎಂದಿನಂತೆ ರಾಮಮಂದಿರದಂತಹ ಭಾವನಾತ್ಮಕ ವಿಷಯ ಎತ್ತುತ್ತ ನಿರುದ್ಯೋಗ, ಬಡತನ, ಬೆಲೆಯೇರಿಕೆ ಮೊದಲಾದ ನೈಜ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆದು ಮತ ಯಾಚಿಸಲಿದೆ. ನೀತಿ ಆಯೋಗ ಬಡತನ ಶೇ.5ಕ್ಕಿಂತ ಕೆಳಗೆ ಇಳಿದಿದೆ ಎಂದು ಹೇಳಿರುವುದು ಸತ್ಯವಲ್ಲ. ವಾಸ್ತವವಾಗಿ ಬಡತನ ಹಾಗೂ ನಿರುದ್ಯೋಗ ಮೊದಲಿಗಿಂತ ಹೆಚ್ಚಾಗಿವೆ ಎಂದು ಆರೋಪಿಸಿದರು.
ಕೇಂದ್ರದ ಖಜಾನೆಯಲ್ಲಿರುವ ಬಡಜನರ ಹಣ ನೈಜ ಫಲಾನುಭವಿಗಳನ್ನು ತಲುಪುತ್ತಿಲ್ಲ. ಅದು ಉದ್ಯಮಿಗಳ ಪಾಲಾಗುತ್ತಿದೆ. ಹೀಗಾಗಿ ಅದು ಅರ್ಹರನ್ನು ತಲುಪಬೇಕೆಂದು ಕಾಂಗ್ರೆಸ್ ಹೋರಾಡುತ್ತಿದೆ. ಈ ಬಾರಿಯ ಭಾರತ್ ಜೋಡೋ ಯಾತ್ರೆ ಸಹ ಇದೇ ಉದ್ದೇಶ ಹೊಂದಿದೆ. ಇದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿಯೂ ಇದೇ ಕಾರಣಕ್ಕಾಗಿ ಹೋರಾಟ ಮಾಡಿದರು ಎಂದರು.
ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸುವುದಾಗಿ ಬಿಜೆಪಿ ನೀಡಿದ್ದ ಭರವಸೆ ಹುಸಿಯಾಗಿದೆ. ಹೀಗಾಗಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವರದಿ ಜಾರಿಗೊಳಿಸುತ್ತದೆ. ಇನ್ನು ಚುನಾವಣೆಯಲ್ಲಿ ಇವಿಎಂ ಬಳಕೆ ಸಂಶಯಾಸ್ಪದವಾಗಿರುವ ಕಾರಣ ಕಾಂಗ್ರೆಸ್ ಅದನ್ನು ವಿರೋಧಿಸುತ್ತದೆ. ಇದೇ ವೇಳೆ ಜಾತಿ ಗಣತಿ ವರದಿ ಬಗ್ಗೆ ಪಕ್ಷದಲ್ಲಿ ಅಸಮಾಧಾನವಿದ್ದರೂ ಸಾಮಾಜಿಕ ನ್ಯಾಯಾ ಕಾರಣ ಪಕ್ಷದ ವರಿಷ್ಠರು ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು.
ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮುಖಂಡರಾದ ಮರಯ್ಯ, ಬಸವಣ್ಣ, ಎಂ.ಶಿವಪ್ರಸಾದ್ ಇದ್ದರು.