ಜಿಲ್ಲೆ

ತೆರವಾಗದ ಆಕ್ರಮಿತ ಸರ್ಕಾರಿ ಜಾಗ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆರೋಪ

ಮಂಡ್ಯ: ಜಿಲ್ಲಾಸ್ಪತ್ರೆಯ ಆವರಣಕ್ಕೆ ಹೊಂದಿಕೊಂಡಿರುವ ಆಕ್ರಮಿತ ಸರ್ಕಾರಿ ಜಾಗವನ್ನು ತೆರವುಗೊಳಿಸಲು ನ್ಯಾಯಾಲಯದ ಆದೇಶವಿದ್ದರೂ ಜಿಲ್ಲಾಡಳಿತ ಮೌನವಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಮನೆ ಕಟ್ಟಿಕೊಂಡಿರುವ ಬಡವರಿಗೆ ಸೂಕ್ತ ಸ್ಥಳವನ್ನು ಗುರುತಿಸಿ ಸ್ಥಳಾಂತರ ಮಾಡಿಕೊಡುವ ಕೆಲಸ ರಾಜ್ಯ ಸರ್ಕಾರದ್ದಾಗಿದೆ. ಈ ಕೂಡಲೇ ಸರ್ಕಾರ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸೂಪರ್ ಫಾಸ್ಟ್ ಮಾರ್ಗವಾಗಿದೆ. ಅಪಘಾತ ನಡೆದರೆ ಗಾಯಾಳುಗಳ ತುರ್ತು ಆರೈಕೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಡ್ಯದಲ್ಲಿ 100 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿಕೊಡಲು ಸಿದ್ಧವಿದೆ. ನಗರದಲ್ಲಿ ಟ್ರಾಮಾ ಕೇರ್ ಸೆಂಟರ್ ಆದಲ್ಲಿ ಲಕ್ಷಾಂತರ ಜನಕ್ಕೆ ಉಪಯೋಗವಾಗುತ್ತದೆ. ಅಪಘಾತಕ್ಕೆ ತುತ್ತಾದ ನೂರಾರು ಜೀವಗಳು ಉಳಿಯುವ ಸಾಧ್ಯತೆ ಇದೆ. ಪ್ರಾಧಿಕಾರ ದೇಶದ ಹೆದ್ದಾರಿಗಳಲ್ಲಿ ಪದೇ ಪದೇ ನಡೆಯುವ ಅಪಘಾತ ನಡೆಯುವ ಬ್ಲಾಕ್ ಸ್ಪಾಟ್ ಗಳನ್ನೂ ಗುರುತಿಸಿ ಅದಕ್ಕೆ ಪರಿಹಾರವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕೆಲಸವನ್ನು ರಾಜ್ಯ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಮಾಡುತ್ತಿದೆ ಎಂದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಯುದ್ದಕ್ಕೂ ಸ್ಥಳೀಯ ಜನರ ಉಪಯೋಗಕ್ಕಾಗಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಿದ್ದೂ, ಸಾರ್ವಜನಿಕರು ಅದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ, ಉಸ್ತುವಾರಿ ಸಚಿವರು ಮತ್ತು ಶಾಸಕರು ವಿನಾಕಾರಣ ಕ್ಯಾತೆ ತೆಗೆಯುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಆರಂಭವಾದ ಮಂಡ್ಯ ಕ್ರೀಡಾಂಗಣ, ತರಕಾರಿ ಮಾರುಕಟ್ಟೆ ಕೆಲಸ ಕೆಲಸ ಕಾಂಗ್ರೆಸ್ ಅಧಿಕಾರಕ್ಕೆ ಬಂದೊಡನೆ ಸ್ಥಗಿತವಾಗಿದೆ. ಕಾಂಗ್ರೆಸ್ ನಾಯಕರು ಇನ್ನಾದರೂ ದ್ವೇಷದ ರಾಜಕಾರಣ ಬಿಟ್ಟು ಮಂಡ್ಯದ ಅಭಿವೃದ್ಧಿಗಾಗಿ ಶ್ರಮಿಸಲಿ ಎಂದು ಒತ್ತಾಯಿಸಿದರು.