ಜಿಲ್ಲೆ

ಬಿಜೆಪಿ ಭಿನ್ನಧ್ವನಿಗೆ ಬ್ರೇಕ್​: ಚೌಕಟ್ಟು ಮೀರಿದರೆ ಶಿಸ್ತುಕ್ರಮ, ಅರುಣ್​ ಸಿಂಗ್​ ಸಂದೇಶ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಸರ್ಕಾರ ಹಾಗೂ ಪಕ್ಷದ ನಡೆ ಹಾದಿಬೀದಿಯಲ್ಲಿ ಚರ್ಚಿಸುವ ವಿಷಯವಲ್ಲ; ನಾಯಕತ್ವ ಬದಲಾವಣೆಯಿಲ್ಲ; ಪಕ್ಷವಿರೋಧಿ ಚಟುವಟಿಕೆ ಸಹಿಸುವುದಿಲ್ಲ ಎಂಬ ಸ್ಪಷ್ಟ ಹಾಗೂ ಖಡಕ್​ ಸೂಚನೆಯನ್ನು ಶಾಸಕರಿಗೆ ನೀಡುವ ಮೂಲಕ ಬಿಜೆಪಿ ವರಿಷ್ಠರು ರಾಜ್ಯದಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತದ ಧ್ವನಿ ಹಾಗೂ ಚಟುವಟಿಕೆಗಳಿಗೆ ಸ್ಪೀಡ್​ ಬ್ರೇಕ್​ ಹಾಕಿದ್ದಾರೆ. ಸರ್ಕಾರ ಮತ್ತು ಪಕ್ಷದಲ್ಲಿನ ಗೊಂದಲ ನಿವಾರಿಸುವುದಕ್ಕಾಗಿ ಬಂದಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​, ರಾಜ್ಯ ಪ್ರವಾಸದ ಎರಡನೇ ದಿನವಾದ ಗುರುವಾರ ಸ್ವಯಂ ಬಯಸಿ ಬಂದ ಶಾಸಕರ ಅಭಿಪ್ರಾಯ ಸಂಗ್ರಹಿಸುವ ಜತೆಗೆ ಮನವಿ ಆಲಿಸಿದರು.

ಒಗ್ಗಟ್ಟಿನ ಮಂತ್ರ ಹಾಗೂ ಸರ್ಕಾರ&ಪಕ್ಷದ ವರ್ಚಸ್ಸು ವೃದ್ಧಿ ತಂತ್ರ ಬೋಧಿಸಿದ ಅವರು, ಸಮಸ್ಯೆ ಏನೇ ಇದ್ದರೂ ಪಕ್ಷದ ವೇದಿಕೆಯೊಳಗೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕೆಂಬ ವರಿಷ್ಠರ ಸಂದೇಶವನ್ನು ರವಾನಿಸಿದರು. ಸಚಿವ ಸಿ.ಪಿ.ಯೋಗೇಶ್ವರ್​ ಭೇಟಿ ಹಾಗೂ ಅಭಿಪ್ರಾಯ ಸಲ್ಲಿಸುವುದಕ್ಕೆ ಮುಕ್ತ ಅವಕಾಶ ನೀಡಿದ ಅರುಣ್​ ಸಿಂಗ್​, ಎಲ್ಲವನ್ನೂ ಕೇಳಿದ ನಂತರ "ನಿಮ್ಮ ಅಭಿಪ್ರಾಯವನ್ನು ವರಿಷ್ಠರಿಗೆ ತಲುಪಿಸುವೆ. ಆದರೆ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟುಮಾಡುವಂತಹ ಬಹಿರಂಗ ಹೇಳಿಕೆ ಸಲ್ಲದು' ಎಂದು ತಾಕೀತು ಮಾಡಿದ್ದಾರೆ.

ಯತ್ನಾಳ್​, ಬೆಲ್ಲದ್​ಗೆ ಇಲ್ಲ ಭೇಟಿ ಅವಕಾಶ
ಸರ್ಕಾರ, ನಾಯಕತ್ವದ ವಿರುದ್ಧ ಪದೇ ಪದೆ ಹೇಳಿಕೆ ನೀಡಿದ್ದಕ್ಕಾಗಿ ಯತ್ನಾಳ್​ಗೆ ಸಮಜಾಯಿಷಿ ಕೇಳಿ ನೋಟಿಸ್​ ನೀಡಲಾಗಿತ್ತು. ಜತೆಗೆ ವರಿಷ್ಠರ ಸೂಚನೆ ಉಲ್ಲಂಘಿಸಿದ ಕಾರಣಕ್ಕಾಗಿ ಅವರಿಗೆ ಭೇಟಿಯಾಗಲು ಅರುಣ್​ ಸಿಂಗ್​ ಅವಕಾಶ ನೀಡಲಿಲ್ಲ. ಅದೇ ರೀತಿ ದೆಹಲಿಯಲ್ಲೇ ಭೇಟಿ ಮಾಡಿದ್ದರೆಂಬ ಕಾರಣಕ್ಕೆ ಬೆಲ್ಲದ್​ ಅವರನ್ನೂ ಭೇಟಿ ಮಾಡಲು ಬಯಸಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಯತ್ನಾಳ್​ ತಾವು ಅರುಣ್​ ಸಿಂಗ್​ ಭೇಟಿಗೆ ಅವಕಾಶ ಕೋರಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ಪ್ರಧಾನ ಕಾರ್ಯದರ್ಶಿ ರವಿಕುಮಾರ್​ ನಿರಾಕರಿಸಿದ್ದಾರೆ.

ಭೇಟಿಗೆ ಅಪೇಸಿದ ಶಾಸಕರು ಮತ್ತು ಕಾರ್ಯಕರ್ತರ ಜತೆಗೆ ಮಾತನಾಡಿ ದ್ದೇನೆ. ಕರೊನಾ ನಿರ್ವಹಣೆ, ಪಕ್ಷದ ಸಂಟನೆ ವಿಷಯದಲ್ಲಿ ಶಾಸಕರಿಂದ ಅತ್ಯುತ್ತಮ ಕಾರ್ಯನಿರ್ವಹಣೆ ಮಾಹಿತಿ ಲಭಿಸಿದ್ದು, ಇದರಿಂದ ಸಂತುಷ್ಟನಾಗಿದ್ದೇನೆ. ಪಕ್ಷದ ಬಲವರ್ಧನೆಗೆ ಸಂಬಂಧಿಸಿದಂತೆ ಶಾಸಕರು ನೀಡಿರುವ ಸಲಹೆಗಳನ್ನು ಪರಿಗಣಿಸಲಾಗುವುದು. ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬಂದಿಲ್ಲ.ಅರುಣ್​ ಸಿಂಗ್​ ಬಿಜೆಪಿ ರಾಜ್ಯ ಉಸ್ತುವಾರಿ ಪಕ್ಷದ ಕಟ್ಟುಪಾಡುಗಳನ್ನು ಮೀರಿ ಪರಿಷತ್​ ಸದಸ್ಯ ವಿಶ್ವನಾಥ್​ ನೀಡಿರುವ ಹೇಳಿಕೆಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಖಂಡಿಸಿದ್ದಾರೆ. ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟುಮಾಡುವ ಹೇಳಿಕೆ ಸಹಿಸಲಾಗದು. ಈ ಹಿನ್ನೆಲೆಯಲ್ಲಿ ವಿಶ್ವನಾಥ್​ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ಕೇಂದ್ರ ಸಮಿತಿಗೆ ಮನವಿ ಮಾಡಲಾಗಿದೆ. ಎನ್​.ರವಿಕುಮಾರ್​ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ