ಜಿಲ್ಲೆ

ಬೂತ್ ವಿಜಯ ಸಂಕಲ್ಪ ಕ್ಷೇತ್ರದ ಗೆಲುವಿಗೆ ಸಹಕಾರಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ಜಿಲ್ಲೆಯ 1,111 ಬೂತ್‌ಗಳಲ್ಲೂ ಜ.2 ರಿಂದ ಜ.12ರ ವರೆಗೆ ನಡೆಯಲಿರುವ ಬೂತ್ ವಿಜಯ ಅಭಿಯಾನದಲ್ಲಿ ಪಕ್ಷದ ಎಲ್ಲ ಸ್ಥರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಬೇಕು. ಬೂತ್ ವಿಜಯದ ಸಂಕಲ್ಪ ಕ್ಷೇತ್ರ ಮತ್ತು ರಾಜ್ಯವನ್ನು ಗೆಲ್ಲಲು ಸಹಕಾರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಸೋಮವಾರ ಬೊಮ್ಮರಬೆಟ್ಟು ಗ್ರಾಮದ ಹಿರಿಯಡ್ಕದಲ್ಲಿ ಬಿಜೆಪಿ ವತಿಯಿಂದ ನಡೆದ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ’ಬೂತ್ ವಿಜಯ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಬೂತ್ ಗೆಲ್ಲುವ ಮೂಲಕ ರಾಜ್ಯವನ್ನು ಗೆಲ್ಲುವ ಅಮಿತ್ ಶಾ ಅವರ ಕನಸು ಮತ್ತೆ ನನಸಾಗಬೇಕು. ಕಾಪು ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲುವು ಮುಂದುವರಿಸಲು ರೂಪುರೇಷೆ ರೂಪಿಸಬೇಕು. ಪ್ರತಿ ಬೂತಿನಲ್ಲೂ ಫಲಾನುಭವಿಗಳ ಸಮಾವೇಶ, ಪ್ರತಿ ಮಂಡಲದಲ್ಲೂ ವಿವಿಧ ಮೋರ್ಚಾ ಸಮಾವೇಶ ನಡೆಸಬೇಕು. ಪ್ರತಿ ಬೂತಿನಲ್ಲೂ ಬೂತ್ ಸಮಿತಿಗಳ ಪರಿಶೀಲನೆ, ಪೇಜ್ ಪ್ರಮುಖರ ನಿಯುಕ್ತಿ, ಮತಗಟ್ಟೆಗಳ ವಾಟ್ಸಾಪ್ ಗ್ರೂಪ್ ರಚನೆ, ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ, ಪ್ರಧಾನಿಯವರ ಮನ್ ಕೀ ಬಾತ್ ವೀಕ್ಷಣೆ ಮುಂತಾದ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಅಲ್ಪಸಂಖ್ಯಾತರ ಪ್ರಾಬಲ್ಯವುಳ್ಳ ಕಾಪು ಕ್ಷೇತ್ರದಲ್ಲಿ ಎಸ್ಡಿಪಿಐ ರಾಜಕೀಯವಾಗಿ ಬೆಳವಣಿಗೆ ಕಾಣುತ್ತಿದೆ. ಹೀಗಾಗಿ ಸಕಾರಾತ್ಮಕ ನೆಲೆಯಲ್ಲಿ ಬೂತ್ ಬಲವರ್ಧನೆಯಾಗಬೇಕು. ಹೆಜಮಾಡಿ ಟೋಲ್ ಸಮಸ್ಯೆ ಬಗೆಹರಿಸಲು ವಿಧಾನಸಭೆಯಲ್ಲಿ ಭರವಸೆ ದೊರೆತಿದೆ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ್ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ ಮಾಂಬೆಟ್ಟು ಉಪಸ್ಥಿತರಿದ್ದರು. ಶ್ಯಾಮಲಾ ಕುಂದರ್ ವಂದೇ ಮಾತರಂ ಹಾಡಿದರು. ಕಾಪು ಮಂಡಲಾಧ್ಯಕ್ಷ ಶ್ರೀಕಾಂತ್ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಕಾರ್ಯಕ್ರಮ ನಿರೂಪಿಸಿದರು.