ಜಿಲ್ಲೆ

ಪ್ರತ್ಯೇಕ ಪಾಲಿಕೆ ಅನುಷ್ಠಾನಕ್ಕೆ ಬಿಜೆಪಿಗರಿಂದ ತಡೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡದ ಅಭಿವೃದ್ಧಿ ದೃಷ್ಟಿಯಿಂದ ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಿಸಲಾಗಿದೆ. ಇದರ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ರಾಜ್ಯಪಾಲರ ಸಹಿಗೆ ಕಳುಹಿಸಿದರೆ, ಸ್ಥಳಿಯ ಬಿಜೆಪಿ ಮುಖಂಡರು ತಡೆಯೊಡ್ಡಿದ್ದಾರೆ ಎಂದು ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಆರೋಪಿಸಿದ್ದಾರೆ.

ಕಿತ್ತೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ 2-3 ತಿಂಗಳ ಹಿಂದೆಯೇ ಪ್ರತ್ಯೇಕ ಪಾಲಿಕೆ ಕಡತವನ್ನು ರಾಜ್ಯಪಾಲರಿಗೆ ಕಳುಹಿಸಿದೆ. ಆದರೆ ಈ ಭಾಗದ ಸಂಸದರು ರಾಜ್ಯಪಾಲರ ಮೇಲೆ ಒತ್ತಡ ಹೇರಿದ್ದರಿಂದ ಸಹಿ ಮಾಡದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಕಾರ್ಯದರ್ಶಿಗಳನ್ನು ಪ್ರಶ್ನಿಸಿದಾಗ, ರಾಜ್ಯಪಾಲರು ಯಾತಕ್ಕಾಗಿ ಸಹಿ ಮಾಡುತ್ತಿಲ್ಲ ಎಂಬ ಸಂಗತಿ ಗೊತ್ತಾಗಿದೆ ಎಂದರು.

ಧಾರವಾಡ ದಿನೇ ದಿನೇ ಬೆಳೆಯುತ್ತಿದೆ. ನಗರದ ಅಭಿವೃದ್ಧಿಗೆ ಪ್ರತ್ಯೇಕ ಪಾಲಿಕೆ ಅಗತ್ಯವಿದೆ. ಜನಸಂಖ್ಯೆ, ತೆರಿಗೆ, ವ್ಯಾಪ್ತಿ ಸೇರಿ ಎಲ್ಲ ಅರ್ಹತೆ ಹೊಂದಿದರೂ ರಾಜಕೀಯ ವಿಷಯವಾಗಿ ಬಿಜೆಪಿ ಮುಖಂಡರು ಪ್ರತ್ಯೇಕ ಪಾಲಿಕೆ ವಿಳಂಬ ಮಾಡುತ್ತಿದ್ದಾರೆ. ಇದು ಧಾರವಾಡದ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ ಎಂಬ ನೋವಿದೆ ಎಂದು ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.