ಬೆಂಗಳೂರು/ಮಂಗಳೂರು: ರಾಜರಾಜೇಶ್ವರಿ ನಗರ, ಶಿರಾ ವಿಧಾನಸಭೆ ಉಪ ಚುನಾವಣೆ ಮುಗಿದು, ದಣಿವಾರಿಸಿಕೊಳ್ಳುವ ಮುನ್ನವೇ ಬಾಕಿಯಿರುವ ಚುನಾವಣೆಗಳತ್ತ ಆಡಳಿತಾರೂಢ ಭಾರತೀಯ ಜನತಾಪಕ್ಷ ಲಕ್ಷ್ಯ ಹರಿಸಿದೆ.
ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆಗಾಗಿ ತಾಲೀಮು ನಡೆಸಲು ಬಿಜೆಪಿ ಭೂಮಿಕೆ ಸಜ್ಜುಗೊಳಿಸಲಾರಂಭಿಸಿದೆ. ಮಂಗಳೂರಿನಲ್ಲಿ ಗುರುವಾರ ನಡೆಯಲಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ, ಕೋರ್ ಕಮಿಟಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿವೆ. ವಿಭಾಗ, ಜಿಲ್ಲಾವಾರು ಪಕ್ಷದ ಸಂಘಟನೆ, ಪದಾಧಿಕಾರಿಗಳಿಗೆ ಒಪ್ಪಿಸಿದ ಜವಾಬ್ದಾರಿ ನಿರ್ವಹಣೆ ಕುರಿತು ವರದಿ ಪರಾಮರ್ಶೆಯಾಗಲಿದೆ. ಹಾಗೆಯೇ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಸೂಚಿಸಿದ ಕೆಲಸಗಳ ಪ್ರಗತಿ ಅವಲೋನವೂ ನಡೆಯಲಿದೆ.
ಮಾರ್ಪಡಿತ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ, ಕೈಗಾರಿಕೆ ವಿವಾದಗಳ ತಿದ್ದುಪಡಿ ಕಾಯ್ದೆ ಸೇರಿ ಸರ್ಕಾರದ ನೀತಿ-ನಿರ್ಧಾರಗಳ ಬಗ್ಗೆ ಸಮಾಲೋಚಿಸಿ, ಸ್ವಾಗತಿಸುವ ನಿರ್ಣಯವನ್ನು ಸಭೆ ಅಂಗೀಕರಿಸಲಿದೆ.
ಪಕ್ಷದ ಕೋರ್ ಕಮೀಟಿ ಸಭೆಯಲ್ಲಿ ಬೆಳಗಾವಿ ಲೋಕಸಭೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವರದಿ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಲಿದೆ. ರಾಜ್ಯಸಭೆ ಸ್ಥಾನದ ಬಗ್ಗೆ ಪ್ರಸ್ತಾಪವಾದರೂ ಅಂತಿಮವಾಗಿ ವರಿಷ್ಠರ ವಿವೇಚನೆಗೆ ಬಿಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಬಿಎಸ್ವೈ,
ಕಟೀಲ್ ಜತೆಗೆ ಕಮಿಟಿ ಸದಸ್ಯರಾದ ಸಿ.ಟಿ.ರವಿ, ಪ್ರಲ್ಹಾದ್ ಜೋಶಿ, ಡಿ.ವಿ.ಸದಾನಂದ ಗೌಡ, ಗೋವಿಂದ ಕಾರಜೋಳ, ಈಶ್ವರಪ್ಪ, ಅಶೋಕ್ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಕಾರ್ಯ ಕಾರಿಣಿ ಸಭೆ ಕಾರ್ಯಸೂಚಿಯಲ್ಲಿ ಸಂಘಟನೆ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ, ಬೆಳಗಾವಿ ಲೋಕಸಭೆ ಉಪ ಚುನಾವಣೆ, ಗ್ರಾ.ಪಂ. ಚುನಾವಣೆ ಬಗ್ಗೆ ಚರ್ಚೆ ವಿಷಯಗಳಿದ್ದು, ಸರ್ಕಾರದ ನೀತಿ-ನಿರ್ಧಾರಗಳ ಕುರಿತು ಗೊತ್ತುವಳಿ ಅಂಗೀಕರಿಸಲಾಗುವುದು. | ಎನ್.ರವಿಕುಮಾರ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಉಪಚುನಾವಣೆ ಕೈಗೆ ಸೋಲು ಖಚಿತ
ಮಂಗಳೂರು: ಶಿರಾ, ಆರ್.ಆರ್. ನಗರ ಉಪ ಚುನಾವಣೆಯನ್ನು ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಎದುರಿಸಿದ್ದು, ನೂರಕ್ಕೆ ನೂರು ದಯನೀಯ ಸೋಲು ಅನುಭವಿಸುತ್ತಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು. ಸಿದ್ದ ರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ಕೊಡುವ ಗೋಜಿನಲ್ಲಿ ಇರಲಿಲ್ಲ. ಆದರೆ ನೀವು(ಮಾಧ್ಯಮದವರು) ಕೇಳಿದ್ದಕ್ಕೆ ಉತ್ತರಿಸುತ್ತಿದ್ದೇನೆ. ಸಿದ್ದರಾಮಯ್ಯ ದಿಲ್ಲಿಯಿಂದ ನನಗೆ ಸುದ್ದಿ ಬಂದಿದೆ, ಯಡಿಯೂರಪ್ಪ ಬದಲಾವಣೆಯಾಗುತ್ತಾರೆ ಎನ್ನುತ್ತಿದ್ದಾರೆ. ನಾನು ಇದೇ ರೀತಿ ಹೇಳಿಕೆ ನೀಡಲೇ? ನಮಗೂ ದೆಹಲಿಯಿಂದ ಮಾಹಿತಿ ಬಂದಿದೆ, ಪ್ರತಿಪಕ್ಷ ನಾಯಕ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಆಗುತ್ತಾರೆ ಅಂತ. ಆದರೆ ಇಂತಹ ಹಗುರವಾದ ಹೇಳಿಕೆ ನೀಡಲು ಇಷ್ಟ ಪಡುವುದಿಲ್ಲ ಎಂದರು.
ಉಪ ಚುನಾವಣೆ ಫಲಿತಾಂಶ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ. ಯಡಿಯೂರಪ್ಪ ಸಿಎಂ ಆಗಿ ಹೆಚ್ಚು ದಿನ ಮುಂದುವರಿಯುವುದಿಲ್ಲ. ದೆಹಲಿಯ ಮಾಹಿತಿ ಆಧಾರದ ಮೇಲೆ ಹೇಳಿದ್ದೇನೆ. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ