ಜಿಲ್ಲೆ

ಅಧಿಕಾರಕ್ಕೇರಿದ ಬಳಿಕ ಮಲತಾಯಿ ಧೋರಣೆ: ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಟೀಕೆ

ಮಂಡ್ಯ: ಚುನಾವಣಾ ಸಂದರ್ಭದಲ್ಲಿ ಬಣ್ಣ ಬಣ್ಣದ ಮಾತುಗಳನ್ನಾಡಿದ ಕಾಂಗ್ರೆಸ್ ಪಕ್ಷ, ಚುನಾವಣೆ ಮುಗಿದು ಅಧಿಕಾರಕ್ಕೇರಿದ ಬಳಿಕ ಮಂಡ್ಯ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆಯನ್ನು ತನ್ನ ಬಜೆಟ್‌ನಲ್ಲಿ ತೋರಿದೆ. ಮೈಷುಗರ್ ಕಾರ್ಖಾನೆಗೆ 50 ಕೋಟಿ ರೂ ಕೊಟ್ಟು ಕೈತೊಳೆದುಕೊಳ್ಳುವ ಕೆಲಸ ಮಾಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಪಶುವೈದ್ಯಕೀಯ ಕಾಲೇಜು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅವಶ್ಯಕತೆ ಇದೆ. ಈ ಬಗ್ಗೆ ಗಮನಹರಿಸಬೇಕಾದ ಸರ್ಕಾರ ಮಂಡ್ಯ ಜಿಲ್ಲೆಗೆ ಅನ್ಯಾಯ ಮಾಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಐವರು ಶಾಸಕರು ಹಾಗೂ ಬೆಂಬಲಿತ ಒರ್ವ ಶಾಸಕ ಅಭಿವೃದ್ಧಿಗೆ ಹೆಚ್ಚಿನ ಹಣ ತರಲು ವಿಫಲರಾಗಿದ್ದಾರೆ. ಈ ಮಧ್ಯೆ ಕೆಆರ್‌ಎಸ್ ಬಳಿ ಡಿಸ್ನಿಲ್ಯಾಂಡ್ ಮಾದರಿ ಪಾರ್ಕ್ ಹಾಗೂ ಕಾವೇರಿ ಪ್ರತಿಮೆ ಮಾಡುವ ಉತ್ಸಾಹ ತೋರುತ್ತಿರುವ ಸರ್ಕಾರದ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾದ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಡಿಸ್ನಿಲ್ಯಾಂಡ್ ಮಾದರಿಯ ಉದ್ಯಾನ ನಿರ್ಮಾಣ ಪರಿಸರ ವಿಜ್ಞಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಕೇಂದ್ರ ಪರಿಸರ ಇಲಾಖೆ ರಂಗನ ತಿಟ್ಟು ಪಕ್ಷಿಧಾಮದ ಸುತ್ತ ಮುತ್ತಲ 6,162 ಎಕರೆ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಿದೆ. ಕೆ.ಆರ್.ಎಸ್. ಅಣೆಕಟ್ಟೆಯು ಏಕಶೀಲಾ ಪದರದ ಮೇಲೆ ನಿರ್ಮಾಣ ವಾಗಿದ್ದು, 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣಕ್ಕೆ ಅಡಿಪಾಯಕ್ಕಾಗಿ ಭೂಮಿಯನ್ನು ಅಗೆದರೆ ಅಣೆಕಟ್ಟೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಹಾಗು ಪರಿಣಿತರು, ಪರಿಸರ ಪ್ರೇಮಿಗಳು ಆನ್‌ಲೈನ್ ಅಭಿಯಾನದ ಮೂಲಕ ಸಹಿ ಮಾಡಿ ಅಂದಿನ ಮುಖ್ಯ ಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಳುಹಿಸಿಕೊಡಲಾಗಿದ್ದು, ಬಳಿಕ ಡಿಸ್ನಿಲ್ಯಾಂಡ್ ಯೋಜನೆ ಕೈ ಬಿಟ್ಟಿದ್ದರು ಎಂದು ತಿಳಿಸಿದ್ದಾರೆ.

ಹೀಗಿದ್ದರೂ ಉಪ ಮುಖ್ಯ ಮಂತ್ರಿಗಳು ಈ ಯೋಜನೆಯ ಅನುಷ್ಠಾನದ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿರುವುದು, ಅನುಮಾನ ಮೂಡಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ನಿಜವಾಗಲೂ ಮಂಡ್ಯ ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ, ಯುವಕರಿಗೆ ಉದ್ಯೋಗ ನೀಡುವ ಮನಸ್ಸಿದ್ದರೆ ಮಳವಳ್ಳಿಯ ಗಗನಚುಕ್ಕಿ, ಭರಚುಕ್ಕಿ ಜಲಪಾತದ ಬಳಿ ನಿರ್ಮಾಣ ಮಾಡಲಿ. ಇದರಿಂದ ಮಂಡ್ಯ, ಚಾಮರಾಜನಗರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಬದಲಾವಣೆಯಾಗುತ್ತದೆ. ಮೇಕೆದಾಟು ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಅದನ್ನು ಬಿಟ್ಟು ಡಿಸ್ನಿಲ್ಯಾಂಡ್ ಮಾದರಿ ಪಾರ್ಕ್ ನಿರ್ಮಾಣಕ್ಕೆ ಹಾತೊರೆಯುತ್ತಿರುವುದು ಹಾಸ್ಯಾಸ್ಪದ. ಸರ್ಕಾರ ಹಠಕ್ಕೆ ಬಿದ್ದು ಯೋಜನೆಗೆ ಮುಂದಾದಲ್ಲಿ ಜಿಲ್ಲೆಯ ರೈತರೊಟ್ಟಿಗೆ ಬೀದಿಗಿಳಿದು ಪ್ರತಿ ಭಟನೆ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.