ಜಿಲ್ಲೆ

ಬಿಜೆಪಿ ಭಿನ್ನಮತ ತೆರೆ ಸನ್ನಿಹಿತ: ವರಿಷ್ಠರ ಸೂಚನೆಯಂತೆ ಎಲ್ಲ ರ್ನಿಣಯ, ಅರುಣ್​ ಸಿಂಗ್​ ಸಂಕಲ್ಪ

ಬೆಂಗಳೂರು: ಆಡಳಿತ ಪಕ್ಷದೊಳಗೆ ಪ್ರತಿಪಕ್ಷ ಸೃಷ್ಟಿಸುವ ಎಲ್ಲ ಪ್ರಯತ್ನಗಳನ್ನು ಬುಡ ಸಹಿತ ಕಿತ್ತು ಹಾಕುವ ಬಿಜೆಪಿ ವರಿಷ್ಠರ ದೃಢ ಸಂಕಲ್ಪದ ಹೊಣೆಗಾರಿಕೆ ಹೊತ್ತು ಕರ್ನಾಟಕಕ್ಕೆ ಆಗಮಿಸಿರುವ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಅಂತರ್ಯುದ್ಧ ಕೊನೆಗಾಣಲೇಬೇಕೆಂಬ ಸ್ಪಷ್ಟ ಸಂದೇಶವನ್ನು ಮೂರು ದಿನಗಳ ಭೇಟಿಯ ಆರಂಭದಲ್ಲೇ ರವಾನಿಸಿದ್ದಾರೆ.

ಬುಧವಾರ ಸಂಜೆ ಬೆಂಗಳೂರಿಗೆ ಆಗಮಿಸಿದ ಅವರು ನೇರವಾಗಿ ಕುಮಾರಕೃಪಾ ಅತಿಥಿಗೃಹಕ್ಕೆ ತೆರಳಿದರು. ಈ ವೇಳೆ ಸಚಿವರ ತಂಡವೊಂದು ಬಹು ಉತ್ಸಾಹದಿಂದ ಪ್ರತ್ಯೇಕ ಭೇಟಿಗೆ ಮುಂದಾಯಿತಾದರೂ ಸಿಂಗ್​ ಅದಕ್ಕೆ ಅವಕಾಶ ಕೊಡಲಿಲ್ಲ. "ಏನಿದ್ದರೂ ಸಭೆಯಲ್ಲಿ ಚರ್ಚಿಸೋಣ' ಎಂದು ನಯವಾಗಿ ಹೇಳಿ ಸಾಗಹಾಕುವ ಮೂಲಕ ವರಿಷ್ಠರು ಸಿದ್ಧಪಡಿಸಿದ ನೀಲಿನೆ ಪ್ರಕಾರವೇ ಎಲ್ಲವೂ ನಡೆಯಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ಪದೇಪದೆ ನಾಯಕತ್ವ ಬದಲಾವಣೆ ಅಪಸ್ವರ, ದೂರು&ದುಮ್ಮಾನಗಳು, ಹಲವರ ದಂಡಯಾತ್ರೆ, ಭೇಟಿ&ಮಾತುಕತೆಯಿಂದಾಗಿ ವರಿಷ್ಠರು ಸಮಸ್ಯೆ ಮೂಲ ಅರಿತಿದ್ದಾರೆ. ಹೀಗೆಯೇ ಬಿಟ್ಟರೆ ಬಿಕ್ಕಟ್ಟು ಬೆಳೆದು ಮತ್ತೊಂದು ಸವಾಲನ್ನು ಮೈಮೇಲೆ ಎಳೆದುಕೊಳ್ಳ ಬೇಕಾದೀತೆಂದು ದಿಗಿಲುಗೊಂಡು ಪರಿಹಾರ ಸೂತ್ರದೊಂದಿಗೆ ಸಿಂಗ್​ ಅವರನ್ನು ಕಳುಹಿಸಿದ್ದಾರೆ.

ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಅದು ಉದ್ದೇಶವೂ ಆಗಿರಲಿಲ್ಲ. ಕರೊನಾ ನಿರ್ವಹಣೆ ಯಲ್ಲಿ ಸರ್ಕಾರ ಉತ್ತಮ ಕೆಲಸ ಮಾಡಿದೆ. ಇನ್ನಷ್ಟು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಪಕ್ಷ ಸಂಟಿಸುವ ಬಗ್ಗೆ ಚರ್ಚೆಯಾಗಿದೆ. | ಅರುಣ್​ ಸಿಂಗ್​ ರಾಜ್ಯ ಉಸ್ತುವಾರಿ

ಯತ್ನಾಳ್​ ವಿರುದ್ಧ ಕ್ರಮ ಪದೇಪದೆ ನಾಯಕತ್ವ ಬದಲಾವಣೆ ಅಪಸ್ವರ, ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟಾಗುವ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಬುಧವಾರ ಹೇಳಿದ್ದಾರೆ. ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಅವರನ್ನೇ (ಯತ್ನಾಳ್​) ಕೇಳಿ ಎಂದು ಸಿಂಗ್​ ಪ್ರತಿಕ್ರಿಯಿಸಿದರು. ಸಿಂಗ್​ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಯತ್ನಾಳ್​ ಬಯಸಿದ್ದು, ಅವಕಾಶ ಕೊಟ್ಟಿಲ್ಲ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ಸಂಭಾವ್ಯ ಪರಿಹಾರ

? ಯೋಗೇಶ್ವರ್​ ಅವರನ್ನು ಕೈಬಿಟ್ಟು ಭಿನ್ನಧ್ವನಿಗೆ ಇತಿಶ್ರೀ

? ಮುಖ್ಯಮಂತ್ರಿಯಾಗುವ ಆಸೆಯಲ್ಲಿರುವ ಬೆಲ್ಲದಗೆ ಮಂತ್ರಿ ಸ್ಥಾನ

? ಅಪಸ್ವರ ಸಹಿಸಲ್ಲವೆಂದು ಇನ್ನುಳಿದ ಭಿನ್ನರಿಗೆ ಎಚ್ಚರಿಕೆಯ ಸಂದೇಶ

? 10 ಜನರನ್ನು ಕೈಬಿಟ್ಟು ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಇಲ್ಲ ಎಂಬ ಸ್ಪಷ್ಟತೆ

? ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಸೂಚನೆ

ಸಮನ್ವಯ ಅಜೆಂಡಾ

ಉಸ್ತುವಾರಿ ಅರುಣ್​ ಸಿಂಗ್​ ಅವರ ಮೂರು ದಿನಗಳ ರಾಜ್ಯ ಪ್ರವಾಸದಲ್ಲಿ ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವಯ ಏರ್ಪಡಿಸುವುದು ಮುಖ್ಯ ಅಜೆಂಡಾ ಎನ್ನಲಾಗಿದೆ. ಪ್ರಮುಖ ವಿಚಾರಗಳಲ್ಲಿ ಸರ್ಕಾರ ಹಾಗೂ ಪಕ್ಷ ಒಗ್ಗೂಡಿದರೆ ಲಾಭ ಎಂಬುದನ್ನು ಮನವರಿಕೆ ಮಾಡಿಸಿ, ಸಂಪರ್ಕ, ಸಂವಹನ ಕೊರತೆ ನಿವಾರಿಸುವುದು, ಗೊಂದಲ ಬಗೆಹರಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.