ಬ್ಯಾಡಗಿ: ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅ ವರ್ಗ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ.
ಪುರಸಭೆ ಒಟ್ಟು 23 ಸದಸ್ಯರನ್ನು ಹೊಂದಿದ್ದು, 17 ಬಿಜೆಪಿ ಹಾಗೂ 6 ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಅಧಿಕಾರದ ಗದ್ದುಗೆ ಏರಲು 12 ಸದಸ್ಯರ ಬೆಂಬಲ ಬೇಕಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಹೀಗಾಗಿ ಬಿಜೆಪಿ ಪುರಸಭೆ ಗದ್ದುಗೆ ಹಿಡಿಯುವುದು ಖಾತ್ರಿಯಾಗಿದೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು: ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಅವರ ಪುತ್ರ ಬಾಲನಗೌಡ್ರ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಹಾಗೂ ಚಂದ್ರಪ್ಪ ಶೆಟ್ಟರ್ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳು. ಅಂತಿಮವಾಗಿ ಯಾರಾಗಬೇಕೆಂಬುದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಸೇರಿ ಪಕ್ಷದ ಹಿರಿಯ ಮುಖಂಡರ ನಿರ್ಧಾರದಿಂದ ತಿಳಿಯಬೇಕಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಅ ವರ್ಗದ ಕಲಾವತಿ ಬಡಿಗೇರ ಹಾಗೂ ಗಾಯತ್ರಿ ರಾಯ್ಕರ ಆಕಾಂಕ್ಷಿಯಾಗಿದ್ದು, ಪಕ್ಷದ ತೀರ್ವನಕ್ಕೆ ಬದ್ಧವೆಂದು ತಿಳಿಸಿದ್ದಾರೆ.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಯಾಗಿ ನನ್ನನ್ನು ನೇಮಿಸಲಾಗಿದೆ. ಚುನಾವಣೆ ದಿನಾಂಕ ಇನ್ನೂ ನಿಗದಿಪಡಿಸಿಲ್ಲ. ದಿನಾಂಕ ಘೊಷಣೆಯಾದ ನಂತರ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.| ಶರಣಮ್ಮ ಕಾರಿ, ತಹಸೀಲ್ದಾರ್