ಜಿಲ್ಲೆ

ಜನರನ್ನು ಬೆಲೆ ಏರಿಕೆ ಸಂಕಷ್ಟಕ್ಕೆ ದೂಡಿದ ಕಾಂಗ್ರೆಸ್: ಬಿಜೆಪಿ ಆರೋಪ

ಮೈಸೂರು: ಚುನಾವಣೆಗೂ ಮೊದಲು ಗ್ಯಾರಂಟಿ ಫ್ರೀ ಫ್ರೀ ಎಂದಿದ್ದ ಕಾಂಗ್ರೆಸ್ ಈಗ ಎಲ್ಲದರಲ್ಲೂ ದರ ಹೆಚ್ಚಳ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಶಾಕ್ ಮೇಲೆ ಶಾಕ್ ಆಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಹರ್ಷದಿಂದ ಹೊಸ ವರ್ಷ ಯುಗಾದಿ ಆಚರಿಸಬೇಕಾದ ಜನರು ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ. ಗ್ಯಾರಂಟಿ ಯೋಜನೆ ಜಾರಿ ಮಾಡಿದ ಸರ್ಕಾರ ಮತ್ತೊಂದೆಡೆ ವಿದ್ಯುತ್, ಬಸ್ ಟಿಕೆಟ್ ದರ, ಹಾಲು, ಮೆಟ್ರೋ, ವೈದ್ಯಕೀಯ ವೆಚ್ಚ, ಮರಣ ಪ್ರಮಾಣ ಪತ್ರ, ಆಪರೇಷನ್ ವೆಚ್ಚ, ಕಂದಾಯ, ಮುದ್ರಾಂಕ ಶುಲ್ಕ, ತೆರಿಗೆಯನ್ನು ಏರಿಕೆ ಮಾಡಿದೆ ಎಂದು ತರಾಟೆಗೆ ತೆಗೆದುಕೊಂಡರು.

ಈ ಮೂಲಕ ಗ್ಯಾರಂಟಿ ಹೆಸರಲ್ಲಿ ಜನರ ದಾರಿ ತಪ್ಪಿಸಿದ ಕಾಂಗ್ರೆಸ್‌ನವರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸದೆ ಹಗರಣ, ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಾಲು ಮತ್ತು ಮೊಸರಿನ ದರ ಮೂರನೇ ಬಾರಿಗೆ ಏರಿಕೆ ಮಾಡಲಾಗಿದೆ. ಏರಿಕೆ ಮಾಡಲಾದ ಹಣವನ್ನು ರೈತರಿಗೆ ಕೊಡದೆ ವಂಚನೆ ಮಾಡಲಾಗುತ್ತಿದೆ ಎಂದು ದೂರಿದರು.

ಪ್ರೋತ್ಸಾಹ ಧನ ಸೇರಿದಂತೆ ಹೈನುಗಾರರಿಗೆ ಈವರೆಗೆ 662 ಕೋಟಿ ರೂ.ಹಣ ಬಾಕಿ ಉಳಿಸಿಕೊಂಡಿದೆ. ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೆಚ್ಚವನ್ನು ಶೇ.10ರಿಂದ 15ರಷ್ಟು ಹೆಚ್ಚಳ ಮಾಡಲಾಗಿದ್ದು, ಬಡವರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಸೇವೆ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಮತ ಬ್ಯಾಂಕ್‌ಗಾಗಿ ತುಷ್ಠೀಕರಣ ಮಾಡಲು ಗುತ್ತಿಗೆಯಲ್ಲಿ ಶೇ.4ರಷ್ಟು ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿದೆ. ಇದು ಸಂವಿಧಾನಕ್ಕೆ ವಿರುದ್ಧ್ಧವಾಗಿದ್ದು, ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವ ಪದ್ಧತಿ ಯಾವ ರಾಜ್ಯದಲ್ಲೂ ಇಲ್ಲ. ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರಿಗೆ ಪ್ರತ್ಯೇಕವಾಗಿ ಮೀಸಲಾತಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ವಿಭಿನ್ನ ಧೋರಣೆ ತಳೆದಿದೆ. ಮುಸ್ಲಿಮರಿಗೆ ನೀಡಿರುವ ಮೀಸಲಾತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿರುವುದರಿಂದ ಸೋಲಿನ ಭೀತಿಯಿಂದ ಕಾಂಗ್ರೆಸ್ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಕಾಂಗ್ರೆಸ್‌ಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಟೀಕಿಸಿದರು.

ಪಾಲಿಕೆಗೆ ಚುನಾವಣೆ ನಡೆಸದ ಕಾರಣ ಕೇಂದ್ರ ಸರ್ಕಾರದ 50ನೇ ಹಣಕಾಸು ಯೋಜನೆಯ ಅನುದಾನ ವಾಪಸ್ ಹೋಗಿದೆ. ಸರ್ಕಾರದ ಈ ಧೋರಣೆ ಖಂಡಿಸಿ ಏ.2ರಂದು ಕೇಂದ್ರ ಹಾಗೂ ರಾಜ್ಯ ನಾಯಕರು, ಶಾಸಕರು ಸೇರಿ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನಲ್ಲಿ ಏ.7ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಜಿಲ್ಲಾಧಕ್ಷ ಎಲ್.ಆರ್.ಮಹದೇವಸ್ವಾಮಿ, ಮುಖಂಡರಾದ ಮ.ಮೋಹನ್, ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್ ಇತರರಿದ್ದರು.