ಬಿಜೆಪಿಯಿಂದ ಮತದಾರರ ಚೇತನ ಮಹಾ ಅಭಿಯಾನ
ಮಂಗಳೂರು : ಮುಂದಿನ ಲೋಕಸಭಾ ಚುನಾವಣೆಗೆ ಪೂರಕವಾಗಿ ಬಿಜೆಪಿ ವತಿಯಿಂದ ದೇಶಾದ್ಯಂತ ಮತದಾರರ ಚೇತನ- ಮಹಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದ.ಕ.ಜಿಲ್ಲೆಯಲ್ಲೂ ಅಭಿಯಾನ ಪ್ರಾರಂಭಗೊಂಡಿದ್ದು, ಹೊಸ ಮತದಾರರ ಸೇರ್ಪಡೆಗೆ
ಕಾರ್ಯಕರ್ತರ ತಂಡವನ್ನು ಸಿದ್ಧಗೊಳಿಸಲಾಗಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ 18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ, ಹೆಸರು ವರ್ಗಾವಣೆ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಪ್ರಕ್ರಿಯೆ ಈ ವೇಳೆ ನಡೆಯಲಿದೆ.ಜಿಲ್ಲೆ ಮಟ್ಟದ ಸಮಿತಿಗೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಹಾಗೂ ದೇವದಾಸ್ ಶೆಟ್ಟಿ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು, ಮಂಡಲ ಅಧ್ಯಕ್ಷರು ಹಾಗೂ ಪ್ರಮುಖರನ್ನು ಒಳಗೊಂಡ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಚುನಾವಣಾ ಆಯೋಗದ ಸಹಕಾರ ಪಡೆದು ಜಿಲ್ಲೆಯ 1,860 ಬೂತ್‌ಗಳಲ್ಲಿ ಬಿಎಲ್‌ಒಗಳ ಕೆಲಸಕ್ಕೆ ಸಾಥ್ ನೀಡಲಾಗುವುದು. ಹೊಸ ಮತದಾರರು ಬಹುತೇಕ ಮಂದಿ ಬಿಜೆಪಿಗೆ ಮತ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.