ತುಮಕೂರು: ಮಹಾನಗರ ಪಾಲಿಕೆಯಲ್ಲಿ ಮೀಸಲು ಅಸ್ತ್ರ ಬಳಸಿ ಅಧಿಕಾರ ಹಿಡಿಯುವ ಬಿಜೆಪಿ ಪ್ರಯತ್ನಕ್ಕೆ ಕಾಂಗ್ರೆಸ್-ಜೆಡಿಎಸ್ ತಿರುಗೇಟು ನೀಡಲು ಸಜ್ಜಾಗಿದೆ. ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧಾರ ಕೈಗೊಂಡಿವೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್, ಕಾಂಗ್ರೆಸ್ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಪೋರೇಟರ್‌ಗಳ ಮಹತ್ವದ ಸಭೆ ನಡೆಸಿದವು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗಟ್ಟಿ: ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗಟ್ಟಿಯಾಗಿದ್ದು ಇದಕ್ಕೆ ಶನಿವಾರ ನಡೆದ ಸಭೆ ಸಾಕ್ಷಿಯಾಗಿತ್ತು. ಮೂರು ವರ್ಷಗಳ ಹಿಂದಷ್ಟೇ ಪಾಲಿಕೆಗೆ ಎಸ್ಟಿ ಮೀಸಲು ನಿಗದಿಯಾಗಿದ್ದು ಈಗ ಮತ್ತೊಮ್ಮೆ ಎಸ್ಟಿ ಮೀಸಲು ಘೋಷಿಸಿರುವುದರ ಬಗ್ಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಮಾಜಿ ಶಾಸಕ ರಫೀಕ್ ಅಹ್ಮದ್, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್, ಎನ್.ಗೋವಿಂದರಾಜು ಸಹಮತ ವ್ಯಕ್ತಪಡಿಸಿದ್ದು, ಕೆಲವು ಜೆಡಿಎಸ್ ಶಾಸಕರು ಬಿಜೆಪಿ ಜತೆ ಹೋಗುವ ಬಗ್ಗೆ ಒಳಗೊಳಗೆ ಗೊಣಗಿಕೊಳ್ಳುತ್ತಿದ್ದುದು ಕಂಡು ಬಂತಾದರೂ ಅಂತಿಮವಾಗಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಲಾಯಿತು
ಪಾಲಿಕೆ ಸದಸ್ಯರಾದ ನಯಾಜ್ ಅಹ್ಮದ್, ಜೆ.ಕುಮಾರ್, ಮಹೇಶ್, ಮೇಯರ್ ಫರೀದಾಬೇಗಂ ಪತಿ ಹಫೀಜ್, ಉಪಮೇಯರ್ ಶಶಿಕಲಾ ಪತಿ ಗಂಗಹನುಮಯ್ಯ, ಮಂಜುನಾಥ್, ಲಕ್ಷ್ಮೀನರಸಿಂಹರಾಜು, ಮಾಜಿ ಮೇಯರ್ ಲಲಿತಾ ಪತಿ ಜಹಂಗೀರ್‌ರವೀಶ್ ಸೇರಿ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.
ಪಾಲಿಕೆಯಲ್ಲಿ ಬಲಾಬಲ: ಪಾಲಿಕೆಯ ಒಟ್ಟು 35 ಸ್ಥಾನಗಳ ಬಲಾಬಲದಲ್ಲಿ ಬಿಜೆಪಿ-12, ಜೆಡಿಎಸ್-10, ಕಾಂಗ್ರೆಸ್-10 ಹಾಗೂ 3 ಪಕ್ಷೇತರ ಸದಸ್ಯರಿದ್ದಾರೆ. ಸರಳ ಬಹುಮತಕ್ಕೆ 18 ಸ್ಥಾನಗಳ ಅಗತ್ಯವಿದ್ದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಒಟ್ಟು 20 ಸದಸ್ಯರ ಬಲ ಹೊಂದಿದೆ. ಹಾಗಾಗಿ, ಮೊದಲ ಹಾಗೂ 2ನೇ ಅವಧಿಗೆ ಜೆಡಿಎಸ್-ಕಾಂಗ್ರೆಸ್ ಜತೆಗೂಡಿ ಅಧಿಕಾರ ಹಿಡಿದಿದ್ದವು. ಈಗ ಮೀಸಲು ಅಸ್ತ್ರ ಬಳಸಿ ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಧಕ್ಕೆ ಉಂಟುಮಾಡಿದೆ.