ಜಿಲ್ಲೆ

ನಕಲಿ ಮತದಾರರು ಹಕ್ಕು ಚಲಾವಣೆಯಿಂದ ದೂರವಿದ್ದು ಜಿಲ್ಲೆಯ ಘನತೆ ಕಾಪಾಡಿ

Kolar

ಕೋಲಾರ: ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವ ನಕಲಿ ಮತದಾರರು ಹಕ್ಕು ಚಲಾವಣೆಯಿಂದ ದೂರವಿದ್ದು ಜಿಲ್ಲೆಯ ಘನತೆ ಕಾಪಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಕೋರಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿರುವ 21,000 ಮತದಾರರಲ್ಲಿ ಸುಮಾರು 2500 ನಕಲಿ ಮತದಾರರ ಹೆಸರು ಸೇರ್ಪಡೆಯಾಗಿರುವ ಗುಮಾನಿಯಿದ್ದು, ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಈಗಾಗಲೇ 300 ಹೆಸರನ್ನು ತೆಗೆದುಹಾಕಲಾಗಿದೆ. ಉಳಿದವರಿಗೂ ನೋಟಿಸ್ ಜಾರಿಯಾಗಿದೆ. ಈ ಸಂಬಂಧ ಶ್ರೀನಿವಾಸಪುರ ತಹಸೀಲ್ದಾರ್‌ಗೆ ರೋಣೂರು, ನೆಲವಂಕಿ, ರಾಯಲ್ಪಾಡು ಭಾಗಕ್ಕೆ ಸಂಬಧಿಸಿದ ಉಪತಹಸೀಲ್ದಾರ್‌ಗಳಿಗೆ ಡಿಸಿ ನೋಟಿಸ್ ನೀಡಿದ್ದಾರೆ ಎಂದು ತಿಳಿಸಿದರು.

ಪದವೀಧರರಲ್ಲದವರು ಮತದಾನ ಮಾಡುವುದು ಅಪರಾಧ. 1 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಹಾಗಾಗಿ ಮತದಾರರಲ್ಲದವರು ಮತಪಟ್ಟಿಯಲ್ಲಿ ಹೆಸರಿದ್ದರೂ ಮತದಾನದಿಂದ ದೂರ ಇರಬೇಕು. ಸಿಕ್ಕಿಬಿದ್ದರೆ ಕೆಟ್ಟ ಹೆಸರು ಬರುವುದರಿಂದ ಜಿಲ್ಲೆಯ ಘನತೆ ಕಾಪಾಡಬೇಕು ಎಂದು ಮನವಿ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಸರ್ಕಾರಿ ನೌಕರರ, ಶಿಕ್ಷಕರು, ರೈತರ ಪರವಾಗಿ ಜನಸ್ನೇಹಿ ಆಡಳಿತ ನೀಡುತ್ತಿದೆ. ಪ್ರಧಾನಿ ಮೋದಿ ಹಿಂದಿನ 5 ವರ್ಷದಲ್ಲಿ ಸ್ಟಾರ್ಟ್‌ಅಪ್, ಡಿಜಿಟಲ್ ಇಂಡಿಯಾ, ಮುದ್ರಾ ಯೋಜನೆ ಮೂಲಕ ನೆರವು, ಅವಕಾಶ ಕಲ್ಪಿಸಿದೆ. ಪ್ರಸ್ತುತ ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಅನೇಕ ಉತ್ತೇಜನಕಾರಿ ಕ್ರಮಗಳು, ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ಮೌಲ್ಯಾಧಾರಿತ ಶಿಕ್ಷಣ ಹಾಗೂ ಜೀವನೋಪಾಯ ಆಧಾರಿತ ಶಿಕ್ಷಣ ನೀಡಲು ಮುಂದಾಗಿದೆ ಎಂದರು.

ಕರೊನಾ ಸಂದರ್ಭದಲ್ಲೂ ಸರ್ಕಾರಿ ನೌಕರರಿಗೆ ಪೂರ್ಣ ವೇತನ ನೀಡುವ ಮೂಲಕ ನೌಕರರ ಪರವಾಗಿದೆ. ಮತದಾರರು ಇದೆಲ್ಲವನ್ನೂ ಪರಿಗಣಿಸಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬಿಜೆಪಿ ಅಭ್ಯರ್ಥಿ ಚಿದಾನಂದ್ ಎಂ ಗೌಡ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಬಿಜೆಪಿ ಕೋರ್ ಕಮಿಟಿ ಸದಸ್ಯರಾದ ಎಸ್.ಬಿ. ಮುನಿವೆಂಕಟಪ್ಪ, ವಿಜಯಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಮಾಧ್ಯಮ ವಕ್ತಾರ ಕೆಂಬೋಡಿ ನಾರಾಯಣಸ್ವಾಮಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಬಾಲಾಜಿ ಇದ್ದರು.