ಜಿಲ್ಲೆ

ಸರ್ಕಾರ ಮಾಡುವ ವಿಚಾರ ಇಲ್ಲ

ಡಿ.ವಿ. ಕಮ್ಮಾರ

ನಾವು ಮೊದಲಿನಂತೆ ಈಗ ಸರ್ಕಾರ ಮಾಡುವುದಿಲ್ಲ

ಅಪರೇಷನ್ ಕಮಲ ಇಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ ಪರೋಕ್ಷ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗುವುದು ನಿಶ್ಚಿತ. ನವೆಂಬರ್-ಡಿಸೆಂಬರ್ ಮಧ್ಯೆ ಸಿದ್ದರಾಮಯ್ಯ ಹೋರಹೋದ ಸಿಎಂ(Outgoing) ಆಗಲಿದ್ದಾರೆ. ಹಾಗಂತ ನಾವು ಸರ್ಕಾರ ರಚಿಸುವ ಹಿಂದಿನಂತಹ ಯಾವುದೇ ಪ್ರಯತ್ನ ಮಾಡುವುದಿಲ್ಲ. ನಾವು ಈಗ ಚುನಾವಣೆಗೆ ಹೋಗಲು ಮಾತ್ರ ಬದ್ಧರಾಗಿದ್ದೇವೆ ಎನ್ನುವ ಮೂಲಕ ಅಪರೇಷನ್ ಕಮಲ, ಮೈತ್ರಿ ದಾರಿಯ ಸರ್ಕಾರ ರಚನೆ ಪ್ರಯತ್ನದಲ್ಲಿ ಬಿಜೆಪಿ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಪರೋಕ್ಷವಾಗಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಕರ್ನಾಟಕದ ಏಕನಾಥ ಶಿಂಧೆಯಾಗಲಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸುತ್ತ, ಏಕನಾಥ ಆಗುತ್ತದೆಯೋ ದೋ ನಾಥ ಆಗುತ್ತದೆಯೋ ಗೊತ್ತಿಲ್ಲ. ಆದರೆ ಹಿಂದಿನಂತೆ(ಅಪರೇಷನ್ ಕಮಲ, ಮೈತ್ರಿ) ನಾವು ಯಾವ ಪ್ರಯತ್ನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಪದೇ ಪದೇ ನಾನೇ ಸಿಎಂ ಎಂದು ಹೇಳಿಕೊಳ್ಳುತ್ತಿದ್ದರೇ, ಅತ್ತ ಕಾಂಗ್ರೆಸ್ಸಿನ ಕೆಲ ಎಂಎಲ್‌ಎಗಳು ಯಾವಾಗ ಇಳಿತಿರಾ? ಎಂದು ಕೇಳುತ್ತಿದ್ದಾರೆ. ರಾಜ್ಯ ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ. ಒಂದೇ ಒಂದು ತಿಂಗಳು ಸಹ ಸಿದ್ದರಾಮಯ್ಯನೇ ಸಿಎಂ ಎಂಬ ಚರ್ಚೆ ಇಲ್ಲ. ಬದಲಿಗೆ ಪ್ರತಿ ತಿಂಗಳು ಸಿಎಂ ಬದಲಾವಣೆಯೇ ಚರ್ಚೆ ಆಗುತ್ತಿದೆ. ಸಿಎಂ ಬದಲಾವಣೆ ಒಪ್ಪಂದ ಆಗಿರುವುದು ನಿಜ. ಆದರೆ ಕೊಟ್ಟ ಅಧಿಕಾರ ಬಿಟ್ಟು ಕೊಡುವ ಜಾಯಮಾನ ಸಿದ್ದರಾಮಯ್ಯನವರಿಗಿಲ್ಲ‌. ಇತ್ತ ಡಿ.ಕೆ. ಶಿವಕುಮಾರ ಬರಬೇಕಿರುವ ಆಡಳಿತ ಬಿಡುವವರಲ್ಲ. ಹೀಗಾಗಿ ನವೆಂಬರ್ ಬಳಿಕ ಸಿಎಂ ಬದಲಾವಣೆ ಖಚಿತ. ಬಿಜೆಪಿ ಕಾಲದಲ್ಲಿ ಗುತ್ತಿಗೆದಾರರಿಂದ ಶೇ. 40ರ ಕಮೀಷನ್ ಆರೋಪ ಕೇಳಿ ಬಂದಿತ್ತು. ಅದು ಸಾಬೀತಾಗಿಲ್ಲ. ಈಗ ಗುತ್ತಿಗೆದಾರರು ಶೇ. 80ರ ಕಮೀಷನ್ ಆರೋಪ‌ ಮಾಡಿದ್ದಾರೆ.‌ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.