ಜಿಲ್ಲೆ

ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗಾಂಧಿ ಕುಟುಂಬದ ಖಜಾನೆ ತುಂಬಿಸುವ ಕೆಲಸದಲ್ಲಿ ಮಗ್ನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರÀ ಆರೋಪಿಸಿದರು. ಮಡಿಕೇರಿಯಲ್ಲಿ ಬುಧವಾರ ನಡೆದ ಪಕ್ಷದ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿದ್ದ ಹಣವನ್ನು ಬೇರೆ ಕಡೆಗೆ ವರ್ಗಾ ಮಾಡಿಕೊಂಡು ವಂಚಿಸಲಾಗಿದೆ. ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಹಿಂದುಳಿದ ಸಮಾಜಗಳನ್ನು ಮರೆತು ಮುಸ್ಲಿಮರ ಹಿಂದೆ ಹೊರಟಿದ್ದಾರೆ. ಗುತ್ತಿಗೆಯಲ್ಲಿ ಶೇ. 4 ಮೀಸಲಾತಿ ಮುಸ್ಲಿಮರಿಗೆ ಕೊಡಲಾಗಿದೆ. ವಿದೇಶದಲ್ಲಿ ಮುಸ್ಲಿಂ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಕೊಡಲಾಗುತ್ತಿದ್ದ ಧನಸಹಾಯವನ್ನು 20ರಿಂದ 30 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಮೌಲ್ವಿಗಳ ವೇತನವನ್ನೂ ಜಾಸ್ತಿ ಮಾಡಲಾಗಿದೆ. ಹೀಗೆ ಮುಸ್ಲಿಮರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್‌ಗೆ ಹಿಂದುಗಳು ಮತ ಹಾಕಿಲ್ಲವೇ ಎಂದು ಪ್ರಶ್ನಿಸಿದ ವಿಜಯೇಂದ್ರ, ಬಿಜೆಪಿ ಮುಸ್ಲಿಂ ವಿರೋಧಿ ಅಲ್ಲ. ಮುಸ್ಲಿಂ ಓಲೈಕೆಯ ವಿರೋಧಿ ಎಂದು ಸ್ಪಷ್ಟಪಡಿಸಿದರು.

ಮೇಕೆದಾಟು, ಕೃಷ್ಣಾ ನದಿ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಮರೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದ ಮೇಲೆ 50 ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು. ಆಶೀರ್ವಾದ ಮಾಡಿದವರೇ ಶಾಪ ಹಾಕುವಂತಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಹೈನುಗಾರರಿಗೆ ಪ್ರೋತ್ಸಾಹ ಧನ ಕೊಡಲು ಆರಂಭಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ಕೊಡದೇ ಉಳಿಸಿಕೊಂಡಿದೆ. ಇದರ ಬದಲು ಗ್ರಾಹಕರಿಗೆ ಹಾಲು ದರ ಏರಿಕೆಯ ಬರೆ ಹಾಕಲಾಗಿದೆ. ಹಾಗಾಗಿ ರೈತ ವಿರೋಧಿ, ಬಡವರ ವಿರೋಧಿ, ಹಿಂದು ವಿರೋಧಿ ಭ್ರಷ್ಟ ಕಾಂಗ್ರೆಸ್‌ಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ವಿಧಾಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಕ್ಷಸರ ರೀತಿಯಲ್ಲಿ ಹಿಂದುಗಳ ಕಗ್ಗೊಲೆ ಆಗುತ್ತಿದೆ.

ಸಿದ್ದರಾಮಯ್ಯ ಮತ್ತು ಪರಮೇಶ್ವರ ಆಡಳಿತದಲ್ಲಿ ರಾಜ್ಯವನ್ನು ಹಳೆಯ ಕಾಶ್ಮೀರ ಮಾಡಲು ಹೊರಟಿದ್ದಾರೆ. ಮಾನ, ಮರ್ಯಾದೆ, ನಾಚಿಕೆ ಇಲ್ಲದ ಸರ್ಕಾರ ಇದು. ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿಗಳನ್ನಾಗಿ ಮಾಡಿಕೊಳ್ಳಲಾಗಿದೆ. ಸರ್ಕಾರಗಳು ಬರುತ್ತದೆ, ಹೋಗುತ್ತದೆ. ಆದರೆ ಪೊಲೀಸರು ಇರುತ್ತಾರೆ. ಹಾಗಾಗಿ ಪೊಲಿಸರು ನ್ಯಾಯದ ಕಡೆ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಇಷ್ಟು ವರ್ಷ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ಮಾಡಿದ ಸಾಲದ ಒಟ್ಟು ಮೊತ್ತವನ್ನು ಸಿದ್ದರಾಮಯ್ಯ ಈಗ ಮಾಡಿದ್ದಾರೆ. ಗಂಡನ ಹತ್ರ 5 ಸಾವಿರ ರೂ. ಕಿತ್ತುಕೊಂಡು ಹೆಂಡತಿಗೆ 2 ಸಾವಿರ ಕೊಡಲಾಗುತ್ತಿದ್ದು, ಜಿಗಣೆ ರೀತಿ ರಕ್ತ ಹೀರುವ ಸರ್ಕಾರ ಇದು ಎಂದು ಹೇಳಿದರು.

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲು ಮಾತನಾಡಿ ಅತಿ ಹೆಚ್ಚು ಹಿಂದು ಕಾರ್ಯಕರ್ತರ ಹತ್ಯೆ ಆಗಿದ್ದೇ ಸಿದ್ದರಾಮಯ್ಯ ಕಾಲದಲ್ಲಿ. ಕಾಂಗ್ರೆಸ್ ಸರ್ಕಾರ ಹಿಂದು ಸಮಾಜದ ಧಮನ ನೀತಿ ಅನುಸರಿಸುತ್ತಿದೆ. ಗೋ ಹಂತಕರಿಗೆ ಅವಕಾಶ ಕೊಡಲಾಗುತ್ತಿದೆ. ಕರ್ನಾಟಕದಲ್ಲಿ ತುಘಲಕ್ ಮತ್ತು ಜಿಹಾದಿ ಸರ್ಕಾರವಿದೆ. ಉಚಿತ ಹೆಸರಿನಲ್ಲಿ ನಿರಂತರ ಬೆಲೆ ಏರಿಕೆ ಮಾಡಲಾಗುತ್ತಿದ್ದು, ಉಸಿರಾಡುವ ಗಾಳಿಗೂ ಟ್ಯಾಕ್ಸ್ ಹಾಕುವ ಸರ್ಕಾರ ಇದಾಗಲಿದೆ ಎಂದರು.

ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಗ್ಯಾರಂಟಿ ಹಿಂದೆ ಓಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಜನರ ಜೀವನಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಜಿಹಾದಿಗಳ ಅಟ್ಟಹಾಸ ಜೋರಾಗುತ್ತದೆ. ಗೃಹಮಂತ್ರಿ ಉಢಾಫೆ ಮಾಡಿದರೆ ಕಾರ್ಯಕರ್ತರು ಸುಮ್ಮನಿರಬೇಕಾ? ಎಷ್ಟೇ ಕೇಸ್ ಹಾಕಿದರೂ ಹಿಂದು ಕಾರ್ಯಕರ್ತರು ಜಗ್ಗುವುದಿಲ್ಲ. ಬಗ್ಗುವುದೂ ಇಲ್ಲ ಎಂದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಮಹದೇವಪೇಟೆ ಚೌಡೇಶ್ವರಿ ದೇವಾಲಯ ಬಳಿಯಿಂದ ಮೆರವಣಿಗೆ ಏರ್ಪಡಿಸಲಾಗಿತ್ತು. ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ರಾಜ್ಯ ಉಪಾಧ್ಯಕ್ಷ ರಾಜಶೇಖರ್, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಂಟ್ವಾಳ ಶಾಸಕ ಹರೀಶ್ ಪೂಂಜಾ, ಎಂಎಲ್‌ಸಿ ಸುಜಾ ಕುಶಾಲಪ್ಪ., ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಮೈಸೂರು ಶಾಸಕ ಶ್ರೀವತ್ಸ, ರೈತಮೋರ್ಚಾ ಅಧ್ಯಕ್ಷ ನಡಹಳ್ಳಿ ಮತ್ತಿತರರು ಇದ್ದರು.