ಜಿಲ್ಲೆ

ಮಾ.6ರಿಂದ ಬಿಜೆಪಿ ಅಹೋರಾತ್ರಿ ಧರಣಿ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲೆಯ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮಾ.6 ಮತ್ತು ಮಾ. 7ರಂದು ಅಹೋರಾತ್ರಿ ಧರಣಿ ನಡೆಸಲಾಗುತ್ತಿದ್ದು, ಈ ಬಜೆಟ್ ಅಧಿವೇಶನದಲ್ಲಿಯೇ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ಮಾ. 11ಕ್ಕೆ ಕೊಡಗು ಬಂದ್ ಕರೆ ನೀಡಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಎಚ್ಚರಿಸಿದ್ದಾರೆ.

ಜಿಲ್ಲೆಯ ಜನತೆ ಮತ್ತು ವಿದ್ಯಾರ್ಥಿಗಳ ಆಶೋತ್ತರದ ಪ್ರತೀಕವಾಗಿರುವ ಕೊಡಗು ವಿಶ್ವ ವಿದ್ಯಾಲಯಕ್ಕೆ ಕೇವಲ 5-6 ಕೋಟಿ ರೂ. ಅನುದಾನ ಕೊಡಲು ವಿಫಲವಾಗಿರುವ ರಾಜ್ಯ ಸರ್ಕಾರ ಇದನ್ನು ಮುಚ್ಚಿ ಬೇರೆ ವಿವಿ ಜತೆ ವಿಲೀನ ಮಾಡಲು ಹೊರಟಿರುವುದನ್ನು ಪಕ್ಷ ಖಂಡಿಸುತ್ತದೆ. ಸ್ವಾಭೀಮಾನದ ಕೊಡಗು ವಿವಿಯನ್ನು ಇಲ್ಲೇ ಉಳಿಸಿಕೊಳ್ಳಬೇಕಾಗಿದೆ. ಕಳೆದ 2 ಅವಧಿಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟಿದ್ದ 25 ಸಾವಿರ ಕೋಟಿ ರೂ. ಹಣವನ್ನು ಇತರ ಉದ್ದೇಶಗಳಿಗೆ ಬಳಸಿ ಆ ಸಮುದಾಯಕ್ಕೆ ಅನ್ಯಾಯ ಮಾಡಿರುವುದರಿಂದ ಈ ಬಜೆಟ್‌ನಲ್ಲಿ ಆ ಸಮುದಾಯಕ್ಕೆ ನ್ಯಾಯ ಒಗಿಸಬೇಕಾಗಿದೆ.

ಜಿಲ್ಲೆಯಲ್ಲಿ ಕಳೆದ 50-60 ವರ್ಷಗಳಿಂದ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಸಿ ಮತ್ತು ಡಿ ಜಾಗಕ್ಕೆ ಬಿಜೆಪಿ ಸರ್ಕಾರ ಇದ್ದಾಗ ಹಕ್ಕು ಪತ್ರ ನೀಡಿದ್ದರೂ ಈಗಿನ ಸರ್ಕಾರ ಈ ಜಾಗವನ್ನು ಮೀಸಲು ಅರಣ್ಯ ಮಾಡಲು ಹೊರಟಿದೆ. ಇಂಥ ಕೊಡಗಿನ ಗಂಭೀರ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಡಿಕೇರಿ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಗುರುವಾರ (ಮಾ.6) ಬೆಳಗ್ಗೆ 10 ಗಂಟೆಯಿAದ ಆರಂಭ ಆಗಲಿರುವ ಧರಣಿ ಶುಕ್ರವಾರ (ಮಾ.7) ಮಧ್ಯಾಹ್ನ 2 ಗಂಟೆಯ ತನಕ ನಡೆಯಲಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಸಚಿವರುಗಳು, ಮಾಜಿ ಶಾಸಕರು ಸೇರಿದಂತೆ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಈ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಕೃಷಿಕರ ಪರವಾಗಿ ನಡೆಯುತ್ತಿರುವ ಧರಣಿಯಲ್ಲಿ ಜಿಲ್ಲೆಯ ಜನತೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಹಾನಿ ಆಗಿದ್ದರೂ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ರೈತರಿಗೆ ಕೊಡುತ್ತಿದ್ದ 4 ಸಾವಿರ ರೂ. ಮತ್ತು ವಿದ್ಯಾನಿಧಿ ಯೋಜನೆಯನ್ನು ಕೈಬಿಡಲಾಗಿದೆ. ರೈತರ 10 ಹೆಚ್.ಪಿ. ತನಕದ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ರೂಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಖಾಸಗಿ ಜಮೀನುಗಳಲ್ಲಿ ಮರಗಣತಿಗೆ ಸರ್ಕಾರ ಮುಂದಾಗಿದೆ. ದೇವಾಲಯಗಳಲ್ಲಿ ಹಲವು ವರ್ಷಗಳಿಂದ ಬಳಕೆಯಲ್ಲಿ ಇರುವ ಪ್ರಾಣಿ ಉತ್ಪನ್ನಗಳಿಗೂ ನಿಷೇಧ ಹೇರಲಾಗಿದೆ. ಧರಣಿ ವೇಳೆ ಈ ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸಲಾಗುವುದು.

ಇದೀಗ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಕೊಡಗಿನ ಗಂಭೀರ ಸಮಸ್ಯೆಗಳಿಗೆ ಈ ಅಧಿವೇಶನದಲ್ಲಿ ಪರಿಹಾರ ಕೊಡದಿದ್ದಲ್ಲಿ ಮಾ.11ಕ್ಕೆ ಕೊಡಗು ಬಂದ್‌ಗೆ ಕರೆ ನೀಡಲಾಗುವುದು. ಈ ಬಂದ್ ಕರೆಗೆ ಕೊಡಗಿನ ಜನತೆ ಸ್ಪಂದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.